ಬೆಂಗಳೂರು, ಫೆ. 22: ಪಂಚಮಸಾಲಿ ಸಮುದಾಯದ ಮುಖಂಡರು ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ 2ಎ ಮೀಸಲಾತಿಗೆ ಆಗ್ರಹಿಸಿ ಇದಿನಿಂದ ಫ್ರೀಡಂ ಪಾರ್ಕ್ನಲ್ಲಿ ಸತ್ಯಾಗ್ರಹ ಆರಂಭಿಸಿದ್ದು, ಬೇಡಿಕೆ ಈಡೇರಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇಂದಿನಿಂದ ಮಾರ್ಚ್ 4ರವರೆಗೂ ಫ್ರೀಡಂ ಪಾರ್ಕ್ ನಲ್ಲಿ ಪಂಚಮಸಾಲಿಗಳ ಸತ್ಯಾಗ್ರಹ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಯಿಂದ ಸಂಜೆ 6ಗಂಟೆಯವರೆಗೆ ಧರಣಿ ನಡೆಯಲಿದೆ. ಸತ್ಯಾಗ್ರಹದಲ್ಲಿ ಸಚಿವರು, ಶಾಸಕರು ಕೂಡ ಭಾಗವಹಿಸುವ ನಿರೀಕ್ಷೆಯಿದೆ.
ಈ ಕುರಿತು ಮಾತನಾಡಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಮೀಸಲಾತಿಗಾಗಿ ಆಗ್ರಹಿಸಿ ಕಳೆದ 38 ದಿನಗಳಿಂದ ಪಾದಯಾತ್ರೆ ನಡೆಸಿದ್ದೇವೆ. ಹೋರಾಟದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದಾರೆ. ಸರ್ಕಾರಕ್ಕೆ ಗಡುವು ನೀಡಿದರೂ ನಮ್ಮ ಬೇಡಿಕೆ ಬಗ್ಗೆ ಯಾವುದೇ ಗಮನ ಹರಿಸಿಲ್ಲ. ಹೀಗಾಗಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದು, ಇಂದಿನಿಂದ ಸತ್ಯಾಗ್ರಹ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.