ನವದೆಹಲಿ, ಡಿ. 04: ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕಳೆದ ತಿಂಗಳು ಪ್ರೊಬೆಷನರಿ ಆಫೀಸರ್ (ಪಿಒ) 2000 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, ಇಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು sbi.co.in ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಒಟ್ಟು ಖಾಲಿ ಹುದ್ದೆಗಳ ಪೈಕಿ 300 ಪರಿಶಿಷ್ಟ ಜಾತಿಗೆ, 150 ಪರಿಶಿಷ್ಟ ಪಂಗಡಕ್ಕೆ, 540 ಇತರೆ ಹಿಂದುಳಿದ ವರ್ಗ (ಒಬಿಸಿ)ಕ್ಕೆ, 200 ಆರ್ಥಿಕವಾಗಿ ದುರ್ಬಲ ವರ್ಗಕ್ಕೆ (ಇಡಬ್ಲ್ಯುಎಸ್), ಸಾಮಾನ್ಯ ವರ್ಗಕ್ಕೆ 810 ಹುದ್ದೆಗಳನ್ನು ಮೀಸಲಿಡಲಾಗಿದೆ. SBI PO 2020 ಆನ್ ಲೈನ್ ಪೂರ್ವಭಾವಿ ಪರೀಕ್ಷೆ ಡಿಸೆಂಬರ್ 31 ರಿಂದ ಜನವರಿ 5, 2021ರವರೆಗೆ ನಡೆಯಲಿದೆ. ಡಿಸೆಂಬರ್ ಮೂರನೇ ವಾರದಿಂದ ಪೂರ್ವಭಾವಿ ಪರೀಕ್ಷೆಯ ಪ್ರವೇಶ ಪತ್ರಗಳು ಲಭ್ಯವಿರುತ್ತವೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅರ್ಹತಾ ಮಾನದಂಡವನ್ನು ಪರಿಶೀಲಿಸಬೇಕು. ಮೀಸಲು ರಹಿತ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಕನಿಷ್ಠ ಮತ್ತು ಗರಿಷ್ಠ ವಯೋಮಿತಿ 21 ಮತ್ತು 30. ಮೀಸಲು ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಎಸ್‌ಬಿಐ ಪಿಒ 2020ರ ನೇಮಕಾತಿಗೆ ಅರ್ಹತೆ ಪಡೆಯಲು, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು. ಪದವಿಯ ಅಂತಿಮ ವರ್ಷದಲ್ಲಿರುವವರು ಸಂದರ್ಶನಕ್ಕೆ ಬರುವಾಗ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಬಗ್ಗೆ ಡಿಸೆಂಬರ್ 31ರಂದು ಅಥವಾ ಅದಕ್ಕೂ ಮುನ್ನ ರುಜುವಾತುಗಳನ್ನು ಹಾಜರುಪಡಿಸಬೇಕಾಗುತ್ತದೆ ಎಂಬ ಷರತ್ತಿಗೆ ಒಳಪಟ್ಟು ಅರ್ಜಿ ಸಲ್ಲಿಸಬಹುದು.