ಅಬುದಾಬಿ ಸೆ 24 : ರಾಹುಲ್ ತ್ರಿಪಾಠಿ (74) ಮತ್ತು ವೆಂಕಟೇಶ್ ಅಯ್ಯರ್ (53) ಮತ್ತು ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ 7 ವಿಕೆಟ್ಗಳ ಗೆಲುವು ಸಾಧಿಸಿದೆ. ಮೊದಲ ಚರಣದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಯುಎಇನಲ್ಲಿ ನಡೆಯುತ್ತಿರುವ ಎರಡನೇ ಚರಣದ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿಯೂ ಕೆಕೆಆರ್ ಗಣನೀಯ ಸಾಧನೆ ಮಾಡಿದ್ದು ಟಾಪ್ 4ಕ್ಕೆ ಕಾಲಿಟ್ಟಿದೆ. ನಾಲ್ಕನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ 6ನೇ ಸ್ಥಾನಕ್ಕೆ ಕುಸಿತಕಂಡಿದೆ
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಮೊದಲ ವಿಕೆಟ್ಗೆ 78 ರನ್ಗಳ ಜೊತೆಯಾಟವನ್ನು ನೀಡಿದರು. ಈ ಮೂಲಕ ದೊಡ್ಡ ಮೊತ್ತವನ್ನು ಪೇರಿಸುವ ಮುನ್ಸೂಚನೆ ನೀಡಿದರು. ಆದರೆ ಮುಂಬೈನ ಲೆಕ್ಕಾಚಾರಕ್ಕೆ ಕೆಕೆಆರ್ ಬೌಲರ್ಗಳು ಅಡ್ಡಿಯಾಗಿದ್ದರು. ಆರಂಭಿಕ ಜೋಡಿಯನ್ನು ಬೇರ್ಪಡಿಸಿದ ಬಳಿಕ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಲು ಕೆಕೆಆರ್ ಬಲರ್ಗಳು ಆರಂಭಿಸಿದ್ದರು. ಬಳಿಕ ಯಾವ ಜೋಡಿಯಿಂದಲೂ ಉತ್ತಮ ಜೊತೆಯಾಟ ಬಾರದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್, ಕೃನಾಲ್ ಪಾಂಡ್ಯ ಕೂಡ ವಿಫಲವಾದರು. ಪೊಲಾರ್ಡ್ ಕೂಡ 21 ರನ್ಗಳಿಸಿ ರನೌಟ್ ಆದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ 155 ರನ್ಗಳನ್ನು ಗಳಿಸಲು ಮಾತ್ರವೇ ಶಕ್ತವಾಯಿತು. ಕೆಕೆಆರ್ ತಂಡದ ಪರ ಲೂಕಿ ಫರ್ಗೂಸನ್, ಪ್ರಸಿದ್ಧ್ ಕೃಷ್ಣ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರೆ ಸುನಿಲ್ ನರೈನ್ 1 ವಿಕೆಟ್ ಪಡೆದು ರನ್ಗಳಿಕೆಗೆ ಕಡಿವಾಣ ಹಾಕಿದರು.
156 ರನ್ಗಳ ಸುಲಭ ಗುರಿ ಬೆನ್ನತಿದ ಕೆಕೆಆರ್ ರಾಹುಲ್ ತ್ರಿಪಾಠಿ ಮತ್ತು ವೆಂಕಟೇಶ್ ಅಯ್ಯರ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ 15.1 ಓವರ್ಗಳಲ್ಲಿ ಗುರಿಯನ್ನು ಬೆನ್ನತ್ತಿ ಗೆಲುವಿನ ನಗೆ ಬೀರಿತು. ಮುಂಬೈಪರ ಬೂಮ್ರಾ 3 ವಿಕೆಟ್ ಪಡೆದರೆ ಉಳಿದ್ಯಾವ ಬೌಲರ್ಗಳು ಕೂಡ ಕೆಕೆಆರ್ ಬ್ಯಾಟ್ಸ್ಮನ್ಗಳ ಮುಂದೆ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿಲು ವಿಫಲರಾದರು.