ಚಾಮರಾಜನಗರ, ಮೇ. 21: ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಹಿರಿಯ ಶ್ರೀಗಳಾದ ಗುರುಸ್ವಾಮಿಗಳ ಆರೋಗ್ಯ ಸ್ಥಿತಿ ತೀರಾ ಬಿಗಡಾಯಿಸಿದ್ದು, ದೈಹಿಕ ಸ್ಥಿತಿ ಕ್ಷೀಣಿಸುತ್ತಿದೆ.
ಕಳೆದ ಎರಡು ವಾರದ ಹಿಂದೆ ಕೋವಿಡ್ ಪಾಸಿಟಿವ್ ಆಗಿದ್ದು, ಗುರುವಾರ ಮತ್ತೆ ಪರೀಕ್ಷಿಸಲಾಗಿ ಪಾಸಿಟಿವ್ ಬಂದಿದೆ. ಹಾಲಿ ಮೈಸೂರಿನ ರಿಂಗ್ ರಸ್ತೆ ಆಲನಹಳ್ಳಿಯ ಸಾಲೂರು ಮಠದ ಶಾಖಾ ಮಠದಲ್ಲಿದ್ದಾರೆ.
ಆಕ್ಸಿಜನ್ ಸ್ಯಾಚುರೇಷನ್ ಬುಧವಾರ 50-60ರ ಆಸುಪಾಸುನಲ್ಲಿದ್ದು, ಹೊಸ ಆಕ್ಸಿಜನ್ ಕಾನ್ಸೆಂಟ್ರೇಟರ್ ತರಿಸಿ ಹಾಕಿಸಲಾಯಿತು. ಈಗ ಸ್ವಲ್ಪ ಸುಧಾರಿಸಿದ್ದರೂ ಪರಿಸ್ಥಿತಿ ಉತ್ತಮವಾಗಿಲ್ಲ.
ಅವರಿಗೆ ಹೃದಯ ಸಂಬಂಧಿ ಖಾಯಿಲೆ, ಕಿಡ್ನಿ ಸಮಸ್ಯೆ ಮತ್ತು ವಿಪರೀತ ಡಯಾಬಿಟಿಸ್ ಇರುವುದರಿಂದ ತಹಬದಿಗೆ ಬಾರದ ಕಾರಣದಿಂದ ಅವರನ್ನು ಆಸ್ಪತ್ರೆಯಿಂದ ಮೈಸೂರಿನ ಶಾಖಾಮಠಕ್ಕೆ ಕರೆತರಲಾಗಿದೆ.
ಊಟ ತಿಂಡಿ ಬಹುಶಃ ಬಿಟ್ಟಿದ್ದಾರೆ. ಕೋವಿಡ್ ಇರುವುದರಿಂದ ಭಕ್ತಾದಿಗಳ ಭೇಟಿಗೆ ಅವಕಾಶವಿಲ್ಲ. ಹಲವಾರು ಸ್ವಾಮೀಜಿಗಳು ಅವರ ಆರೈಕೆ ಮಾಡುತ್ತಿದ್ದಾರೆ ಎಂದು ಶ್ರೀಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.