ಚೆನ್ನೈ, ಏ. 15: ಕೊನೆ ಕ್ಷಣದವರೆಗೂ ಭಾರೀ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ, ಕೊನೆ ಕ್ಷಣದವರೆಗೂ ಛಲ ಬಿಡದೆ ಹೋರಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಐಪಿಎಲ್ ಟೂರ್ನಿಯ 6ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ 6 ರನ್ಗಳ ರೋಚಕ ಗೆಲುವು ಸಾಧಿಸಿತು.
ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬೆಂಗಳೂರು, 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ಗಳ ಪೈಪೋಟಿಯುತ ಮೊತ್ತ ದಾಖಲಿಸಿತು. ಈ ಸವಾಲು ಬೆನ್ನತ್ತಿದ ಹೈದ್ರಾಬಾದ್, ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ಗಳ ವೈಫಲ್ಯದಿಂದಾಗಿ 6 ರನ್ಗಳ ಸೋಲು ಕಂಡಿತು. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸತತ 2ನೇ ಗೆಲುವಿನೊಂದಿಗೆ ಪಾಯಿಂಟ್ಸ್ ಟೇಬಲ್ ಅಗ್ರ ಸ್ಥಾನಕ್ಕೇರಿತು.
ಬೆಂಗಳೂರು ತಂಡದ ಸವಾಲು ಎದುರಿಸಿದ ಸನ್ ರೈಸರ್ಸ್ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ವೃದ್ಧಿಮಾನ್ ಸಾಹ ಕೇವಲ 1 ರನ್ಗಳಿಸಿ ಔಟಾದರು. ನಂತರ ಜೊತೆಯಾದ ನಾಯಕ ಡೇವಿಡ್ ವಾರ್ನರ್ (24) ಹಾಗೂ ಮನೀಷ್ ಪಾಂಡೆ (38) 2ನೇ ವಿಕೆಟ್ಗೆ 83 ರನ್ಗಳ ಉತ್ತಮ ಜೊತೆಯಾಟದಿಂದ ತಂಡವನ್ನ ಗೆಲುವಿನ ಹಾದಿಯತ್ತ ಕೊಂಡೊಯ್ಯುವ ಭರವಸೆ ಮೂಡಿಸಿದ್ದರು. ಆದರೆ, ಅರ್ಧಶತಕ ಬಾರಿಸಿ ಉತ್ತಮವಾಗಿ ಆಡುತ್ತಿದ್ದ ನಾಯಕ ವಾರ್ನರ್, ದೊಡ್ಡ ಹೊಡೆತಕ್ಕೆ ಯತ್ನಿಸಿ ತಮ್ಮ ವಿಕೆಟ್ ಕೈಚಲ್ಲಿದರು.
ಈ ಹಂತದಲ್ಲಿ ಬಲಿಷ್ಠ ಕಮ್ಬ್ಯಾಕ್ ಮಾಡಿದ ಬೆಂಗಳೂರು, ತಂಡದ ಬೌಲರ್ಗಳು ಎದುರಾಳಿ ಬ್ಯಾಟ್ಸಮನ್ಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಪರಿಣಾಮ ವಾರ್ನರ್ ಔಟಾದ ಬಳಿಕ ಶಹಬಾಸ್ ಆಹ್ಮದ್ ಮಾಡಿದ 16ನೇ ಓವರ್ನಲ್ಲಿ ಜಾನಿ ಬೈರ್ಸ್ಟೋವ್(12), ಮನೀಷ್ ಪಾಂಡೆ(38) ಹಾಗೂ ಅಬ್ದುಲ್ ಸಮದ್(0) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿದರು. ನಂತರ ಬಂದ ವಿಜಯ್ ಶಂಕರ್(3) ಹಾಗೂ ಹೋಲ್ಡರ್(4) ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಕೊನೆ ಹಂತದಲ್ಲಿ ರಶೀದ್ ಖಾನ್ ಸ್ಪೋಟಕ 17 ರನ್ಗಳಿಸಿದರೂ, ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಪರಿಣಾಮ ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನು ಕೈಚಲ್ಲಿದ ಸನ್ರೈಸರ್ಸ್ ಹೈದ್ರಾಬಾದ್, ಈ ಸೀಸನ್ನಲ್ಲಿ ಸತತ ಎರಡನೇ ಸೋಲಿನ ಆಘಾತ ಅನುಭವಿಸಿತು. ಬೆಂಗಳೂರು ಪರ ಉತ್ತಮ ಬೌಲಿಂಗ್ ನಡೆಸಿದ ಶಹಬಾಸ್ ಅಹ್ಮದ್ 3 ವಿಕೆಟ್ ಪಡೆದರೆ, ಹರ್ಷಲ್ ಪಟೇಲ್, ಸಿರಾಜ್ ತಲಾ 2 ಹಾಗೂ ಜೆಮಿಸನ್ 1 ವಿಕೆಟ್ ಪಡೆದು ಬೆಂಗಳೂರು ತಂಡದ ಗೆಲುವಿಗೆ ಕಾರಣರಾದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಬೆಂಗಳೂರು ತಂಡಕ್ಕೆ, ಗ್ಲೆನ್ ಮ್ಯಾಕ್ಸ್ವೆಲ್(59) ಅವರ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಆಸರೆಯಾದರು. ಇವರಿಗೆ ಸಾಥ್ ನೀಡಿದ ನಾಯಕ ವಿರಾಟ್ ಕೋಹ್ಲಿ(33) ರನ್ಗಳಿಸಿದರು. ಪರಿಣಾಮ ರಾಯಲ್ ಚಾಲೆಂಜರ್ಸ್ 20 ಓವರ್ಗಳಲ್ಲಿ 149 ರನ್ಗಳಿಸಿತು. ಸನ್ ರೈಸರ್ಸ್ ಪರ ಹೋಲ್ಡರ್ 3, ರಶೀದ್ ಖಾನ್ 2 ವಿಕೆಟ್ ಪಡೆದರು. ಉಭಯ ತಂಡಗಳು ಮೇ 9ರಂದು ನಡೆಯುವ 2ನೇ ಪಂದ್ಯದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ.