ಬೆಂಗಳೂರು, ನ. 25: ಶಕ್ತಿ ಕೇಂದ್ರದಲ್ಲಿರುವ ಸುಮಾರು 542 ಕಿರಿಯ ಸಹಾಯಕರ ಹುದ್ದೆಗಳನ್ನ ರದ್ದುಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗ್ತಿದೆ.
ಬೊಕ್ಕಸದ ಹೊರೆಯನ್ನ ಕಡಿಮೆಗೊಳಿಸುವ ಹಿನ್ನೆಲೆಯಲ್ಲಿ ಹಣಕಾಸು, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಬೃಹತ್ ನೀರಾವರಿ, ಕಂದಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮುಖ್ಯಮಂತ್ರಿಗಳ ಕಾರ್ಯಾಲಯ ಸೇರಿದಂತೆ ಮತ್ತಿತರ ಕಡೆ ಉದ್ಯೋಗಿಗಳನ್ನ ಹೆಚ್ಚುವರಿಯಾಗಿ ನಿಯೋಜನೆಗೊಳಿಸಲಾಗಿದೆ. ಈ ಹುದ್ದೆಗಳು ಅನಗತ್ಯವಾಗಿದ್ದು, ಜೊತೆಗೆ ಕೆಲವು ಕಡೆ 2-3 ಮಂದಿ ನೌಕರರು ಒಂದೇ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಅನಗತ್ಯ ಸಿಬ್ಬಂದಿಗಳನ್ನ ಪುನಃ ಮಾತೃ ಇಲಾಖೆಗೆ ನಿಯೋಜನೆ ಮಾಡಬೇಕೆಂದು ಡಿಪಿಎಆರ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗ್ತಿದೆ.
ಅದರಂತೆ, ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿಯೂ 2 ರಿಂದ 3 ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದು, ಸರ್ಕಾರಕ್ಕೆ ಪ್ರತಿ ತಿಂಗಳು ಕನಿಷ್ಟವೆಂದರೂ ರೂ.2 ಕೋಟಿ ಹೊರೆಯಾಗುತ್ತಿದೆ. ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗ್ತಿದೆ. ಇನ್ನು ಪ್ರಸ್ತುತ ವಿಧಾನಸೌಧ, ವಿಕಾಸದೌಧ ಹಾಗೂ ಎಂಎಸ್ ಬಹುಮಹಡಿ ಕಟ್ಟಡಗಳಲ್ಲಿ ಹುದ್ದೆಗಳನ್ನ ಮಂಜೂರು ಮಾಡಲಾಗಿದ್ದು, 3000-3500 ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.