ರಣಬೀರ್ ಕಪೂರ್(Ranbeer Kapoor), ಹಿಂದಿ ಚಿತ್ರರಂಗದ(Bollywood) ಒಬ್ಬ ಪ್ರತಿಭಾವಂತ ಸ್ಟಾರ್ ನಟನಾಗಿದ್ದು, ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನಾಲ್ಕು ವರ್ಷಗಳ ಸುದೀರ್ಘ ಅವಧಿಯ ನಂತರ “ಶಂಶೇರಾ”(Samsheera) ಚಿತ್ರದ ಮೂಲಕ ಮತ್ತೆ ದೊಡ್ಡ ಪರದೆಯ ಮೇಲೆ ಬರುತ್ತಿರುವ ರಣಬೀರ್ ಕಪೂರ್ ಅವರನ್ನು ಸ್ವಾಗತಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದರು. ಅದರಂತೆ ಇದೀಗ ಚಿತ್ರ ಬಿಡುಗಡೆಯಾಗಿದೆ, ಆದರೆ ಸಿನಿಮಾ ನೋಡಿದ ಅಭಿಮಾನಿಗಳ ಕುತೂಹಲಕ್ಕೆ ತಣ್ಣೀರೆರಚಿದಂತಾಗಿದೆ!
ಹೌದು, ಕರಣ್ ಮಲ್ಹೋತ್ರಾ(Karan Malhotra) ನಿರ್ದೇಶನ(Direction) ಹಾಗೂ ಯಶ್ ರಾಜ್ ಫಿಲ್ಮ್ಸ್ ಅವರಿಂದ ನಿರ್ಮಾಣಗೊಂಡ ಈ ಅದ್ದೂರಿ ಬಜೆಟ್ಟಿನ ಚಿತ್ರದ ಮುಖ್ಯ ಪಾತ್ರಗಳಲ್ಲಿ ರಣಬೀರ್ ಕಪೂರ್, ವಾಣಿ ಕಪೂರ್ ಹಾಗೂ ಸಂಜಯ ದತ್(Sanjay Dutt) ಕಾಣಿಸಿಕೊಂಡಿದ್ದಾರೆ. ರಣಬೀರ್ ಕಪೂರ್ ದ್ವಿಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರವು ಒಂದು ಪಿರಿಯಡ್ ಸಿನಿಮಾವಾಗಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ ಸಿನಿಮಾ ನೋಡಿದ ಪ್ರೇಕ್ಷಕರು ಕೊಂಚಮಟ್ಟಿಗೆ ನಿರಾಶೆಗೊಂಡಂತೆ ಕಾಣುತ್ತಿದೆ.
ಸಿನಿ ಪ್ರೇಕ್ಷಕರ ಪ್ರಕಾರ, ಚಿತ್ರದ ಮೊದಲಾರ್ಧ ಹಾಗೂ ಕೆಲವು ದೃಶ್ಯಗಳು ಅದ್ಭುತವಾಗಿವೆ, ಆದರೆ ಚಿತ್ರಕಥೆಯಲ್ಲಿ ಯಾವ ಹೊಸತನವೂ ಇಲ್ಲ. ಮೊದಲಾರ್ಧವನ್ನು ಬಹಳ ಎಳೆಯಲಾಗಿದೆ, ವಾಣಿ ಕಪೂರ್ ಚಿತ್ರ ಸೋಲಲು ಎಲ್ಲ ರೀತಿಯ ಪ್ರಯತ್ನ ಪಟ್ಟಿದ್ದಾರೆ, ಸಂಜಯ್ ಬಾಬಾ ಅವರ ಪ್ರದರ್ಶನ ಎಂದಿನಂತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಚಿತ್ರಕಥೆ ನಿಧಾನವಾಗಿದ್ದು, ಹಿನ್ನೆಲೆ ಸಂಗೀತ, ಛಾಯಾಚಿತ್ರಗ್ರಹಣ, ಇವೆಲ್ಲ ಸೇರಿ ಚಿತ್ರವನ್ನು ಕೊಂಚ ಮಟ್ಟಿಗೆ ಆಕರ್ಷಕ ಎನಿಸುವಂತೆ ಮಾಡಿವೆ. ಸಾಹಸ ದೃಶ್ಯಗಳು, ಭಾವನಾತ್ಮಕ ಅಂಶಗಳು ಚಿತ್ರದಲ್ಲಿ ಅತ್ಯದ್ಭುತವಾಗಿ ಮೂಡಿ ಬಂದಿವೆ.
ಆದರೆ ಚಿಂತಿಸಬೇಕಾದ ವಿಷಯ ಎಂದರೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರೇಕ್ಷಕರು ಬಂದಿಲ್ಲ. ಡಿಎನ್ಎ ವರದಿಯಂತೆ, ಸೌತ್ ಟ್ರೇಡ್ ಚಿತ್ರ ವಿಮರ್ಶಕ ರಮೇಶ್ ಬಾಲಾ ಅವರ ಅನಿಸಿಕೆಯಂತೆ ಶಂಶೇರಾ ಮೊದಲ ದಿನದಂದು ಗಲ್ಲಾ ಪೆಟ್ಟಿಗೆಯಲ್ಲಿ 10-12 ಕೋಟಿ ರೂಪಾಯಿಗಳಷ್ಟು ಗಳಿಕೆ ಮಾಡಲಿದೆ. ಇನ್ನು ವಾರಾಂತ್ಯಗಳು ಬಾಕಿ ಇದ್ದು, ಮುಂದಿನ ದಿನಗಳಲ್ಲಿ ಚಿತ್ರಾಭಿಮಾನಿಗಳು ರಣಬೀರ್ ಅವರನ್ನು ಹಾಗೂ ಶಂಶೇರಾ ಚಿತ್ರವನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂಬುದರ ಮೇಲೆ ಚಿತ್ರದ ಯಶಸ್ಸು ಅವಲಂಬಿತವಾಗಿದೆ.