ರಾಷ್ಟ್ರೀಯ ರಾಜಕೀಯದಲ್ಲಿ ರಾಷ್ಟ್ರಪತಿ ಚುನಾವಣೆ(President Election) ಕಾವು ಹೆಚ್ಚುತ್ತಿದ್ದು ಎಲ್ಲ ಪ್ರಾದೇಶಿಕ ಪಕ್ಷಗಳು ಒಮ್ಮತದ ಅಭ್ಯರ್ಥಿ ಆಯ್ಕೆಗಾಗಿ ಕಸರತ್ತು ನಡೆಸುತ್ತಿವೆ. ಈಗಾಗಲೇ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ 17 ಪಕ್ಷಗಳು ಒಮ್ಮೆ ಸಭೆ ನಡೆಸಿವೆ. ಇದೀಗ ಮತ್ತೊಮ್ಮೆ ಸಭೆ ನಡೆಸಲು ಎನ್‍ಸಿಪಿ(NCP) ಮುಖ್ಯಸ್ಥ ಶರದ್ ಪವಾರ್(Sharad Pawar) ಮುಂದಾಗಿದ್ದಾರೆ. ಹೀಗಾಗಿ ಆಲ್-ಇಂಡಿಯಾಮಜ್ಲಿಸ್-ಎ-ಇತ್ತೆಹಾದುಲ್ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಒವೈಸಿಯನ್ನು(Asaduddin Owaisi) ಮಾತುಕತೆಗೆ ಕರೆದಿದ್ದಾರೆ.
ಸಭೆಗೆ ನಮ್ಮನ್ನು ಆಹ್ವಾನಿಸಿರುವುದಕ್ಕೆ ಶರದ್ ಪವಾರ್ ಅವರಿಗೆ ಧನ್ಯವಾದ ತಿಳಿಸಿರುವ ಓವೈಸಿ, ಔರಂಗಾಬಾದ್ ಸಂಸದ ಮತ್ತು ಎಐಎಂಐಎಂ ಪಕ್ಷದ ನಾಯಕ ಇಮ್ತಿಯಾಜ್ ಜಲೀಲ್ರನ್ನು ಸಭೆಗೆ ಹಾಜರಾಗಲು ನಿಯೋಜಿಸಿದ್ದಾರೆ. ಇನ್ನು ರಾಷ್ಟ್ರಪತಿ ಚುನಾವಣೆ ಕುರಿತು ಚರ್ಚಿಸಲು ಜೂನ್ 21ರಂದು ವಿರೋಧ ಪಕ್ಷಗಳ ಸಭೆಯನ್ನು ಕರೆಯಲಾಗಿದೆ. ಮಧ್ಯಾಹ್ನ 2.30ಕ್ಕೆ ಸಂಸತ್ ಭವನದಲ್ಲಿ ವಿರೋಧ ಪಕ್ಷಗಳ ಸಭೆ ಆಯೋಜಿಸಲಾಗಿದೆ. ಟಿಎಂಸಿ, ಕಾಂಗ್ರೆಸ್ ಮತ್ತು ಎನ್‍ಸಿಪಿ, ಸಿಪಿಐ, ಸಿಪಿಐ(ಎಂ), ಸಿಪಿಐಎಂಎಲ್, ಐಯುಎಂಎಲ್ ಮತ್ತು ಜೆಎಂಎಂ, ಶಿವಸೇನೆ, ಆರ್‍ಜೆಡಿ, ಎಸ್ಪಿ, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಜೆಡಿಎಸ್, ಡಿಎಂಕೆ, ಆರ್‍ಎಲ್‍ಡಿ ಪಕ್ಷಗಳು ಸಭೆಯಲ್ಲಿ ಭಾಗವಹಿಸಲಿವೆ.
ಆದರೆ ಆಮ್ ಆದ್ಮಿ ಪಕ್ಷ, ಕೆಸಿಆರ್ ಪಕ್ಷ ಸಭೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿವೆ. ಇನ್ನು ಈ ಹಿಂದೆ ನಡೆದ ಸಭೆಯಲ್ಲಿ ವಿರೋಧ ಪಕ್ಷಗಳು, ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಅಭ್ಯರ್ಥಿಯಾಗುವಂತೆ ಕೇಳಿದ್ದವು.. ಆದರೆ ಪವಾರ್ ಈ ಪ್ರಸ್ತಾಪವನ್ನು ನಿರಾಕರಿಸಿದರು. ನಂತರ ಫಾರೂಕ್ ಅಬ್ದುಲ್ಲಾ ಮತ್ತು ಗೋಪಾಲಕೃಷ್ಣ ಗಾಂಧಿ ಹೆಸರುಗಳನ್ನು ಮಮತಾ ಬ್ಯಾನರ್ಜಿ(Mamata Banerjee) ಪ್ರಸ್ತಾಪಿಸಿದ್ದರು. ಆದರೆ, ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ವಿರೋಧ ಪಕ್ಷದ ನಾಯಕರ ಮನವಿಯನ್ನೂ ಅಬ್ದುಲ್ಲಾ ಮತ್ತು ಗೋಪಾಲಕೃಷ್ಣ ಗಾಂಧಿ ತಿರಸ್ಕರಿಸಿದ್ದರು.
ಇನ್ನು ಜುಲೈ 18ರಂದು ರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆಯಲಿದ್ದು, ಜುಲೈ 21ರಂದು ಫಲಿತಾಂಶ ಪ್ರಕಟವಾಗಲಿದೆ.