ಮಹಾರಾಷ್ಟ್ರ, ಎ. 02: ಇಲ್ಲಿನ ಕೋಲ್ಹಾಪೂರ್ ಜಿಲ್ಲೆಯಲ್ಲಿ ಇತ್ತೀಚೆಗೆ ಪತ್ತೆಯಾದ ಹೊಸ ಪ್ರಭೇದದ ಹೂವಿನ ಗಿಡಕ್ಕೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೆಸರನ್ನು ಇಡಲಾಗಿದೆ. ಕೇಂದ್ರ ಸಚಿವರಾಗಿದ್ದಾಗ ಶರದ್ ಪವಾರ್ ಅವರು ಭಾರತೀಯ ಕೃಷಿ ಕ್ಷೇತ್ರಕ್ಕೆ ಸಲ್ಲಿಸಿದ ಅಪಾರ ಕೊಡುಗೆಗಳಿಗೆ ಗೌರವಾರ್ಥ ಹೂವಿನ ಗಿಡವೊಂದಕ್ಕೆ ಆರ್ಜೇರಿಯ ಶರದ್ಚಂದ್ರಾಜಿ ಎಂಬ ಹೆಸರು ನೀಡಲಾಗಿದೆ.
ಹೊಸ ಗಿಡದ ಬಗ್ಗೆ ಮಾತನಾಡಿದ ಅಧ್ಯಯನಕಾರರಾದ ಪ್ರಮೋದ್. ಆರ್. ಲಾವಾಂಡ್ ಮತ್ತು ಡಾ.ವಿನೋದ್ ಬಿ ಶಿಂಪಾಲೆ, ಆ ಗಿಡವು ಆರ್ಜೇರಿಯ ಪ್ರಭೇದಕ್ಕೆ ಸೇರಿದ್ದು, ಇವು ಆಲಂಪ್ರಭು ದೇವ್ ರಾಯ್ಗಳಲ್ಲಿ(ಪವಿತ್ರ ತೋಪು ) ಕಂಡು ಬರುತ್ತವೆ ಎಂದಿದ್ದಾರೆ. ಲಾವಾಂಡ್ ಮತ್ತು ಶಿಂಪಾಲೆ ಕೋಲ್ಹಾಪೂರ್ನ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದಾರೆ.
ಆರ್ಜೇರಿಯ ಪ್ರಭೇದಕ್ಕೆ ಸೇರಿದ 40 ಉಪ ಪ್ರಭೇದಗಳು ಭಾರತದಲ್ಲಿ ಕಂಡುಬಂದಿವೆ. ಈ ಪ್ರಭೇದಗಳು ಏಷ್ಯಾದ ರಾಷ್ಟ್ರಗಳಲ್ಲಿ ಮಾತ್ರ ಕಂಡುಬರುತ್ತವೆ. 40ರ ಪೈಕಿ 17 ಪ್ರಭೇದಗಳು ಸ್ಥಳೀಯವಾಗಿ ಕಂಡುಬಂದಿದ್ದು, 18ನೇ ಪ್ರಭೇದವನ್ನು ನಾವು ರಾಮ್ಲಿಂಗ್ ಬೆಟ್ಟದ ಆಲಂಪ್ರಭು ಪವಿತ್ರ ತೋಪುಗಳಲ್ಲಿ ಪತ್ತೆ ಹಚ್ಚಿದ್ದೇವೆ ಎಂದು ಶಿಂಪಾಲೆ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಗಿಡವು ಜುಲೈ ಮತ್ತು ಸಪ್ಟೆಂಬರ್ ತಿಂಗಳ ಮಧ್ಯೆ ಹೂಬಿಡುತ್ತಿದ್ದು, ಡಿಸೆಂಬರ್ ತಿಂಗಳು ಫಲ ಬಿಡುವ ಅವಧಿಯಾಗಿದೆ. ಇವುಗಳು ತೆರೆದ ಬಯಲಿನ ಹುಲ್ಲುಗಾವಲಿನಲ್ಲಿ ಬೆಳೆಯುತ್ತಿದ್ದು, ಇತರ ಪೊದೆಗಳ ಬಳಿ ಬೇರೂರುತ್ತವೆ ಎಂದಿದ್ದಾರೆ ಶಿಂಪಾಲೆ
ಕೆಲವು ವರ್ಷಗಳ ಹಿಂದೆ ಪವಾರ್ ಅವರು ಬಾರಾಮತಿಯಲ್ಲಿನ ಹೂವಿನ ಗಿಡಗಳ ಬಗ್ಗೆ ಅಧ್ಯಯನ ವರದಿಯನ್ನು ಪ್ರಕಟಿಸಲು ಆರ್ಥಿಕ ಸಹಾಯ ಮಾಡಿದ್ದರು. ಶರದ್ ಪವಾರ್ ಅವರ ಚುನಾವಣಾ ಕ್ಷೇತ್ರವಾಗಿದೆ ಬಾರಾಮತಿ. ಹಾಗಾಗಿಯೇ ಹೊಸ ಪ್ರಭೇದದ ಹೂವಿನ ಗಿಡಕ್ಕೆ ಶರದ್ ಪವಾರ್ ಅವರ ಹೆಸರನ್ನಿರಿಸಿದ್ದೇವೆ. ಜೀವ ವೈವಿಧ್ಯಗಳಿಂದ ಸಮೃದ್ಧವಾಗಿರುವ ಕೋಲ್ಹಾಪೂರ್ ಜಿಲ್ಲೆಯ ಪಶ್ಚಿಮ ಘಟ್ಟದ ಪರಿಸರ ವಲಯಕ್ಕೆ ಶರದ್ ಪವಾರ್ ಅವರು ನೀಡಿದ ಅನನ್ಯ ಕೊಡುಗೆಗೆ ಗೌರವಾರ್ಥ ಈ ಗಿಡಕ್ಕೆ ಅವರ ಹೆಸರು ಇರಿಸಲಾಗಿದೆ ಎಂದು ಶಿಂಪಾಲೆ ಹೇಳಿದ್ದಾರೆ.