ಬೆಂಗಳೂರು, ಫೆ. 08: ಅಕ್ರಮ ಆಸ್ತಿ ಗಳಿಕೆಯಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ.ಶಶಿಕಲಾ, ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಈಗ ತಮಿಳುನಾಡಿನತ್ತ ಪ್ರಯಾಣ ಬೆಳೆಸಿದ್ದಾರೆ.
ನಗರದ ದೇವನಹಳ್ಳಿ ಬಳಿ ಇರುವ ರೆಸಾರ್ಟ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದ ಶಶಿಕಲಾ ಸೋಮವಾರ ತಮಿಳುನಾಡಿನ ಕಡೆಗೆ ಪ್ರಯಣಿಸಿದ್ದಾರೆ. ತಮಿಳುನಾಡು ಗಡಿಯವರೆಗೂ ಶಶಿಕಲಾ ಅವರ ಸ್ವಾಗತ ಕಾರ್ಯಕ್ರಮಗಳಿಗೆ ಬೆಂಗಳೂರು ಪೊಲೀಸರು ನಿಷೇಧ ಹೇರಿದ್ದಾರೆ. ಕೋವಿಡ್ ನಿಯಮ ಪಾಲನೆ ಹಾಗೂ ಕಾನೂನು, ಸುವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಶಶಿಕಲಾ ಬೆಂಬಲಿಗರು ರ್‍ಯಾಲಿಗಳನ್ನು ನಡೆಸಲು ಮಾಡಿರುವ ಮನವಿಯನ್ನು ಬೆಂಗಳೂರು ಗ್ರಾಮಾಂತರ ಮತ್ತು ನಗರ ಪೊಲೀಸರು ತಿರಸ್ಕರಿಸಿದ್ದಾರೆ.
ಈ ನಡುವೆ, ಬರೋಬ್ಬರಿ 4 ವರ್ಷಗಳ ಜೈಲುವಾಸದ ಬಳಿಕ ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ ಶಶಿಕಲಾ ಅವರು ಚೆನ್ನೈಗೆ ತೆರಳಿದ್ದಾರೆ. ಈ ವೇಳೆ ಅವರನ್ನು ಬರಮಾಡಿಕೊಳ್ಳಲು ಕಾಯುತ್ತಿದ್ದ ಬೆಂಬಲಿಗರ ಕಾರು ಅಗ್ನಿ ಅವಘಡಕ್ಕೆ ತುತ್ತಾಗಿವೆ. ಕೃಷ್ಣಗಿರಿ ಟೋಲ್ ಬಳಿ ಎರಡು ಕಾರುಗಳು ಹೊತ್ತಿ ಉರಿದಿವೆ. ಶಶಿಕಲಾಳ ಅವರನ್ನು ಸ್ವಾಗತಿಸಲು ಸಜ್ಜಾಗಿದ್ದ ಬೆಂಬಲಿಗರ ಕಾರುಗಳಿಗೆ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದಿದೆ. ಆದರೆ ಘಟನೆಗೆ ಸೂಕ್ತ ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ.