ಹೊಸದಿಲ್ಲಿ, ನ. 12: ಹೊಸದಿಲ್ಲಿಯಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದಿಲ್ಲಿಯ 33 ಖಾಸಗಿ ಆಸ್ಪತ್ರೆಗಳಲ್ಲಿ ಶೇ.80 ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೆ ಮೀಸಲಿರಿಸುವಂತೆ ದೆಹಲಿ ಹೈ-ಕೋರ್ಟ್ ನಿರ್ದೇಶಿಸಿದೆ.
ದೇಶದ ರಾಜಧಾನಿಯಲ್ಲಿ ನ.11ರಂದು ಒಂದೇ ದಿನ ದಾಖಲೆಯ 8593 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಈವರೆಗೂ 7228 ಮಂದಿ ಕೊರೊನಾ ಸೋಂಕಿನಿಂದ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯ 33 ಖಾಸಗಿ ಆಸ್ಪತ್ರೆಗಳಲ್ಲಿ ಶೇ.80 ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೆ ಮೀಸಲಿಡುವಂತೆ ಹೈ-ಕೋರ್ಟ್ ನಿರ್ದೇಶಿಸಿದೆ.
ಅಲ್ಲದೇ ಈ ಆದೇಶ ಎರಡು ವಾರಗಳಿಗಷ್ಟೇ ಸೀಮಿತವಾಗಿದ್ದು, ನವೆಂಬರ್ 26ರಂದು ಈ ಆದೇಶವನ್ನು ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು. ಕೇವಲ ಬೆಡ್‌ಗಳನ್ನು ಮಾತ್ರವಲ್ಲದೇ ಶೇ.80 ಐಸಿಯುಗಳನ್ನು ಕೊರೊನಾ ಸೋಂಕಿತರಿಗೆ ಮೀಸಲಿಡುವಂತೆ ನಿರ್ದೇಶಿಸಿರುವ ನ್ಯಾಯಾಲಯ, ಉಳಿದ ಶೇ.20 ಐಸಿಯುಗಳನ್ನು ಪ್ರತ್ಯೇಕವಾಗಿರಿಸಲು ಸೂಚಿಸಿದೆ.