ಶಿವಮೊಗ್ಗ : ಭಾನುವಾರ ಸಂಜೆ ಹಿಂದೂಪರ ಕಾರ್ಯಕರ್ತ ಹರ್ಷ ಎಂಬಾತನನ್ನು ಅಪರಿಚಿತ ದುರ್ಷರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ನಡೆದಿದೆ. ಘಟನೆಯಿಂದಾಗಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಎರಡು ಕಡೆ ಕಲ್ಲುತೂರಾಟ ನಡೆದ ಘಟನೆಯೂ ವರದಿಯಾಗಿದೆ. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ. ನಗರ ವ್ಯಾಪ್ತಿಯಲ್ಲಿ ಬರುವ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಲಾಗಿದ್ದು, ಈಗಾಗಲೇ ಜಾರಿಯಲ್ಲಿದ್ದ 144 ಸೆಕ್ಷನ್ ಅನ್ನು ಮತ್ತೆರಡು ದಿನ ವಿಸ್ತರಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಸುದ್ದಿ ತಿಳಿಯುತ್ತಿದ್ದಂತೆ ಮೆಗ್ಗಾನ್ ಆಸ್ಪತ್ರೆ ಎದುರು ನೂರಾರು ಮಂದಿ ಧಾವಿಸಿದ್ದಾರೆ. ಈ ವೇಳೆ ಕೆಲವರು ಆಸ್ಪತ್ರೆಯ ಮೇಲೆ ಕಲ್ಲು ತೂರಿದ್ದಾರೆ. ಇದರಿಂದ ಆಸ್ಪತ್ರೆ ಗಾಜುಗಳಿಗೆ ಹಾನಿಯಾಗಿದೆ. ಕಲ್ಲುತೂರಾಟ-ಘಟನೆ ಬೆನ್ನಲ್ಲೇ ನಗರದ ರವಿವರ್ಮ ಬೀದಿ ಮತ್ತು ಆಜಾದ್ ನಗರದಲ್ಲಿ ಕಲ್ಲು ತೂರಾಟದ ಘಟನೆ ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ. ಈ ಮಧ್ಯೆ, ನಗರದ ಎಲ್ಲೆಡೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.