ಬೆಂಗಳೂರು ಅ 31 : ಕನ್ನಡದ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ ಹಠಾತ್ ನಿಧನರಾದ ಹಿನ್ನಲೆಯಲ್ಲಿ ಮನನೊಂದು ಕೆಲವು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್ ಅಪ್ಪು ಇಲ್ಲ ಅಂತ ಹೇಳಲು ಕಷ್ಟ ಆಗತ್ತೆ, ತುಂಬ ಚಿಕ್ಕವನು. ಆದಷ್ಟು ಬೇಗ ಭಗವಂತನಿಗೆ ಇಷ್ಟ ಆಗಿಬಿಟ್ಟರೆ ನಮಗೆ, ಅಭಿಮಾನಿಗಳಿಗೆ ನೋವು ಆಗುತ್ತಿದೆ. ಜನರು ಅಳುವುದನ್ನು ನೋಡಿ ಇನ್ನಷ್ಟು ಬೇಸರ ಆಗುತ್ತದೆ. ಅವಸರವಾಗಿ ಕರೆದುಕೊಂಡು ಬಿಟ್ನಾ ಅಂತ ಅನಿಸುತ್ತಿದೆ. ಇಲ್ಲಿ ಎಲ್ಲಿಯೋ ಹೋಗಿದ್ದಾನಾ ಅಂತ ಅನಸ್ತಿದೆ. ನನಗಿಂತ 13 ವರ್ಷ ಚಿಕ್ಕವನು. ನಾನು ಅವನನ್ನು ಎತ್ತಿ ಆಡಿಸಿದವನು. ನನ್ನ ಮಗುವನ್ನು ಕಳೆದುಕೊಂಡಷ್ಟು ದುಃಖ ಆಗ್ತಿದೆ. ಕುಟುಂಬ ಇದೆ, ಜೀವನ ಸಾಗಬೇಕು, ನಾವು ಅವರ ಜೊತೆಗಿರುತ್ತೇವೆ, ಸುಲಭವಾಗಿ ನಾವು ಬಿಟ್ಟುಕೊಡೋದಿಲ್ಲ.
ಪುನೀತ್ ಇದ್ದಾನೆ. ನನ್ನಲ್ಲಿ, ರಾಘು, ಚಿತ್ರರಂಗ, ನಿರ್ಮಾಪಕರಲ್ಲಿ ಪುನೀತ್ ಇದ್ದಾನೆ. ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡರೆ ಪುನೀತ್‌ಗೆ ಇಷ್ಟ ಆಗಲ್ಲ, ದಯವಿಟ್ಟು ಹೀಗೆಲ್ಲ ಮಾಡಬೇಡಿ, ಆ ರೀತಿ ಹೆಜ್ಜೆ ಇಡಬೇಡಿ. ಅಭಿಮಾನ ಇರಬೇಕು, ಆದರೆ ಕುಟುಂಬದ ಜೊತೆಗೆ ನೀವು ಇರಬೇಕು, ಅದು ನಿಮ್ಮ ಜವಾಬ್ದಾರಿ. ನಿಮ್ಮ ಅವಶ್ಯಕತೆ ನಿಮ್ಮ ಕುಟುಂಬಕ್ಕಿದೆ. ನಮಗೂ ಕೂಡ ಅಪ್ಪು ಕಂಡರೆ ಇಷ್ಟ, ಆದರೆ ನಾವು ಇಲ್ವಾ? ನಮ್ಮ ಕುಟುಂಬದ ಜೊತೆಗೆ ನಾವು ಇರಬೇಕು, ಅದು ನಮ್ಮ ಜವಾಬ್ದಾರಿ ಆಗತ್ತೆ. ನಿಮ್ಮ ಕೋಪ, ನೋವು ತೋರಿಸಬೇಡಿ, ಏನೇ ಆದರೂ ದುಃಖ ನುಂಗಿ ನಡೆಯುತ್ತಿರಬೇಕು, ಇದನ್ನೇ ಅಪ್ಪಾಜಿ ಕೂಡ ಹೇಳುತ್ತಿದ್ದರು. ಎಲ್ಲರೂ ಅವರವರ ಕೆಲಸ ಮಾಡಿಕೊಳ್ಳಿ. ಎಲ್ಲವನ್ನು ಮರೆತು ನಾವು ಹೇಳಿದ ಮಾತು ನೆನಪಿಟ್ಟುಕೊಳ್ಳಿ ಎಂದು ಅಭಿಮಾನಿಗಳಲ್ಲಿ ಶಿವಣ್ಣ ಮನವಿಮಾಡಿದ್ದಾರೆ.