ಶಿವಮೊಗ್ಗ, ಜ. 22: ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದ್ದ ಶಿವಮೊಗ್ಗದಲ್ಲಿ ಸಂಭವಿಸಿದ ಸ್ಪೋಟ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ.
ಶಿವಮೊಗ್ಗದ ಹುಣಸೋಡು ಬಳಿ ನಿನ್ನೆ ರಾತ್ರಿ ಸಂಭವಿಸಿದ ಭಾರೀ ಅನಾಹುತದಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದ ಸುದ್ದಿ ತೀವ್ರ ಆಘಾತಕಾರಿ ಹಾಗೂ ದುರದೃಷ್ಟಕರ. ಹಿರಿಯ ಅಧಿಕಾರಿಗಳೊಂದಿಗೆ ನಿನ್ನೆ ತಡರಾತ್ರಿಯಿಂದಲೇ ಸಂಪರ್ಕದಲ್ಲಿದ್ದು, ಅಗತ್ಯ ರಕ್ಷಣಾ ಕಾರ್ಯಾಚರಣೆಗೆ ತಂಡಗಳನ್ನು ಈಗಾಗಲೇ ರವಾನಿಸಲಾಗಿದೆ.
ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಕುಟುಂಬದವರಲ್ಲಿ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರೆಲ್ಲರೂ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಈ ದುರ್ಘಟನೆಯ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದು ತಿಳಿಸಿದ್ದಾರೆ.
ಈ ನಡುವೆ ಘಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದು(ಶುಕ್ರವಾರ) ಶಿವಮೊಗ್ಗಕ್ಕೆ ಬೇಟಿ ನೀಡಲಿದ್ದು, ತಮ್ಮ ತವರು ಜಿಲ್ಲೆಯಲ್ಲಿ ನಡೆದಿರುವ ಘಟನಾ ಸ್ಥಳಕ್ಕೂ ಸಹ ಬೇಟಿ ನೀಡಲಿದ್ದಾರೆ. ಅಲ್ಲದೇ ದುರ್ಘಟನೆಗೆ ಸೂಕ್ತ ಕಾರಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಎಚ್ಡಿಕೆ ಆಗ್ರಹ:
ಈ ನಡುವೆ ಶಿವಮೊಗ್ಗದಲ್ಲಿ ಸಂಭವಿಸಿದ ಸ್ಫೋಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಿವಮೊಗ್ಗದ ಅಬ್ಬಲಗೆರೆಯ ಹುಣಸೋಡು ಗ್ರಾಮದ ಕಲ್ಲುಕ್ವಾರಿಯಲ್ಲಿ ಜಿಲಿಟಿನ್ ಕಡ್ಡಿಗಳ ಸ್ಫೋಟದಿಂದ ಅನೇಕ ಕಾರ್ಮಿಕರು ಸಾವು ಕಂಡಿರುವುದು ಅತ್ಯಂತ ನೋವಿನ ಸಂಗತಿ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ.
ಕಲ್ಲು ಕ್ವಾರಿಯಲ್ಲಿ ನಡೆದ ಈ ಸ್ಫೋಟದುರಂತದ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ಬಡ ಕಾರ್ಮಿಕರ ಜೀವ ಹರಣಕ್ಕೆ, ಈ ದುರ್ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಆಗ್ರಹಿಸಿದ್ದಾರೆ.