ಶಿವಮೊಗ್ಗ, ಜ. 22: ಶಿವಮೊಗ್ಗದ ಹುಣಸೋಡು ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಸ್ಫೋಟಕ್ಕೆ ಬಲಿಯಾಗಿರುವುದಕ್ಕೆ ಸಂತಾಪ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.
ಘಟನೆ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿರುವ ಅವರು, ಶಿವಮೊಗ್ಗ ನಗರ ಸಮೀಪ ಜಿಲೆಟಿನ್ ಸ್ಪೋಟಗೊಂಡು ಹಲವು ಮಂದಿ ಕಾರ್ಮಿಕರು ಸಾವಿಗೀಡಾದ ಸುದ್ದಿ ಕೇಳಿ ಸಂಕಟವಾಯಿತು. ಮುಖ್ಯಮಂತ್ರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಮೃತ ಕಾರ್ಮಿಕರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು.
ನಿರ್ಲಕ್ಷ್ಯ ತೋರುವ ಮೂಲಕ ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸುತ್ತೇನೆ. ರಾಜ್ಯದ ಹಲವೆಡೆ ಅಕ್ರಮ ಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿರುವ ಆರೋಪ ಕೇಳಿಬರುತ್ತಿದ್ದು, ಅವುಗಳ ಮೇಲೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿದೆ.
ಈ ನಡುವೆ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಿನ್ನೆ ರಾತ್ರಿ ಶಿವಮೊಗ್ಗದ ಹುಣಸೋಡು ಬಳಿ ಸಂಭವಿಸಿದ ಭಾರೀ ಅನಾಹುತದಲ್ಲಿ ಅನೇಕ ಜನರು ದುರಂತ ಸಾವಿಗೀಡಾದ ಸುದ್ದಿ ತೀವ್ರ ಆಘಾತಕಾರಿ ಹಾಗೂ ದುರದೃಷ್ಟಕರ. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಕುಟುಂಬದವರಲ್ಲಿ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಈ ದುರ್ಘಟನೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಮತ್ತೊಂದೆಡೆ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಶಿವಮೊಗ್ಗದ ಹುಣಸೋಡು ಬಳಿ ನಿನ್ನೆ ತಡ ರಾತ್ರಿ ಸಂಭವಿಸಿದ ದುರ್ಘಟನೆಯ ಸುದ್ದಿ ತಿಳಿದು ಮನಸ್ಸಿಗೆ ಬಹಳ ನೋವಾಗಿದೆ. ಭಗವಂತನು ದುರಂತದಲ್ಲಿ ಜೀವ ಕಳೆದುಕೊಂಡವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.