ಮಂಡ್ಯದ ಮಾಜಿ ಸಂಸದರಾಗಿದ್ದ ಎಲ್ .ಆರ್. ಶಿವರಾಮೇಗೌಡ ದೂರವಾಣಿಯಲ್ಲಿ ಮತ್ತೊಬ್ಬರ ಜೊತೆಗೆ, ಮುಂದಿನ 2023ರ ಚುನಾವಣೆ ಕುರಿತು ಮಾತನಾಡಿರುವ ಕರೆಯ ಆಡಿಯೋ ಲೀಕ್ ಆಗಿದ್ದು, ಮಂಡ್ಯ ಲೋಕಸಭಾ ಉಪಚುನಾವಣೆಗೆ ಮೂವತ್ತು ಕೋಟಿ ಖರ್ಚು ಮಾಡಿದ್ದೆ. ಮುಂಬರುವ ವಿಧಾನಸಭಾ ಚುನಾವಣೆಗೆ ನಾಗಮಂಗಲ ಜೆಡಿಎಸ್ ಅಭ್ಯರ್ಥಿಯಾಗಿ ನಾನೇ ಅಖಾಡಕ್ಕೆ ಇಳಿದು ಸೆಣಸಾಡಲಿದ್ದೇನೆ. 30 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡುವೆ ಎಂದು ಹೇಳಿರುವ ಆಡಿಯೋ ಈಗ ವೈರಲ್ ಆಗಿದೆ.
ಈ ಸಂಭಾಷಣೆ ಯಾರೊಟ್ಟಿಗೆ ನಡೆದಿದೆ ಎಂಬುದನ್ನು ಕಲೆಹಾಕಿದಾಗ ತಿಳಿದುಬಂದಿರುವ ಮಾಹಿತಿ ಕೊಪ್ಪ ಹೋಬಳಿಯ ನೆರೆಹೊರೆಯಲ್ಲಿರುವ ಜೆಡಿಎಸ್ ಮಹಿಳಾ ಕಾರ್ಯಕರ್ತೆ ಜೊತೆ ಸಂಭಾಷಣೆ ನಡೆಸಿದ್ದಾರೆ ಎನ್ನಲಾಗಿದೆ. ಈ ಆಡಿಯೋದಲ್ಲಿ ಎಂ.ಎಲ್.ಸಿ ಚುನಾವಣೆಗೆ ಇಪ್ಪತ್ತೇಳು ಕೋಟಿ ಖರ್ಚು ಮಾಡಿದ್ದೆ, 6 ತಿಂಗಳಿಗೆ ಎಂ.ಪಿ ಚುನಾವಣೆಗೆ ಮೂವತ್ತು ಕೋಟಿ ಖರ್ಚು ಮಾಡಿದ್ದೆ ಎಂದು ಶಿವರಾಮೇಗೌಡರು ಬಹಿರಂಗಪಡಿಸಿದ್ದಾರೆ.
ಮುಂಬರುವ ನಾಗಮಂಗಲ ಚುನಾವಣೆಯಲ್ಲಿ ನಾನು ಕಣಕ್ಕಿಳಿಯಲಿದ್ದು, ಮೂವತ್ತು ಕೋಟಿ ರೂಪಾಯಿ ಖರ್ಚು ಮಾಡುತ್ತೇನೆ ಎಂದು ಸಂಭಾಷಣೆಯಲ್ಲಿ ತಿಳಿದು ಬಂದಿದೆ. ಈ ಮಾತುಕತೆಯ ಆಡಿಯೋ ಸುಮಾರು 37 ನಿಮಿಷ 54 ಸೆಕೆಂಡ್ ಗಳ ಕಾಲ ನಡೆದಿದೆ. ಈ ಒಂದು ಆಡಿಯೋ ಈಗ ಭಾರಿ ವೈರಲ್ ಆಗಿದೆ. ನನ್ನದು 8 ಶಾಲೆಗಳು ಇದೆ, ತಿಂಗಳಿಗೆ 3 ಕೋಟಿ ಸಂಭಾವನೆ ಕೊಡುತ್ತೇನೆ. ನಾಗಮಂಗಲ ವಿಧಾನಸಭೆ ಚುನಾವಣೆಗೆ ಹತ್ತು ತಿಂಗಳ ಸಂಬಳದಷ್ಟೇ ಹಣದ ಅಗತ್ಯವಿದೆ. ಹೀಗಾಗಿ ಅಷ್ಟೂ ಹಣವನ್ನು ನಾನು ಈ ಬಾರಿ ಖರ್ಚು ಮಾಡಲಿದ್ದೇನೆ. ತಮ್ಮ ಬೆಂಬಲ ಸಂಪೂರ್ಣವಾಗಿ ನನ್ನ ಕಡೆ ಇರಬೇಕು ಎಂದು ಮಹಿಳಾ ಕಾರ್ಯಕರ್ತೆಗೆ ಹೇಳಿದ್ದಾರೆ.

ಕಳೆದ ವಾರದಲ್ಲಿ ಕೊಪ್ಪಗೆ ತೆರೆಳಿದಾಗ, ಅಲ್ಲಿನ ಸಭೆಗೆ ಮಹಿಳಾ ಕಾರ್ಯಕರ್ತೆಗೆ ಆಹ್ವಾನ ನೀಡಲು ಕರೆ ಮಾಡಿರುವ ಆಡಿಯೋ ಎನ್ನಲಾಗಿದೆ. ನಾಗಮಂಗಲ ಜೆಡಿಎಸ್ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಶಿವರಾಮೆಗೌಡ, ನಾಗಮಂಗಲದ ಜೆಡಿಎಸ್ ಶಾಸಕರ ವಿರುದ್ಧವೂ ಆಡಿಯೋದಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ನಾನು ಎರಡು ಬಾರಿ ಅವರು ಮಾಡಿದ ಕೆಲಸಕ್ಕಿಂತ ಅಪ್ಪನಂಥ ಕೆಲಸ ಮಾಡಬಹುದು. ಈ ಕಾರಣಕ್ಕೆ ನನ್ನನ್ನು ಗೆಲ್ಲಿಸಿ ಎಂದು ಕೇಳಿದ್ದಾರೆ. ಕಳೆದ ಬಾರಿ ನಮಗೆ ಸುರೇಶ್ ಗೌಡ ಲೋಕಸಭೆ ಟಿಕೆಟ್ ಸಿಗದಂತೆ ಮಾಡಿದರು. ಬಳಿಕ ನಿಖಿಲ್ ಕುಮಾರಸ್ವಾಮಿ ಅವರನ್ನು ಚುನಾವಣೆಗೆ ನಿಲ್ಲಿಸಿ ಅವರ ಕುಟುಂಬಕ್ಕೆ ಕಳಂಕ ತಂದುಕೊಂಡರು ಎಂದು ಮಾತನಾಡಿದ್ದಾರೆ. ಸದ್ಯ ಈ ಆಡಿಯೋ ಭಾರಿ ವೈರಲ್ ಆಗಿದ್ದು, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳುತ್ತಿದ್ದಾರೆ.