Davanagere: ರಾಜ್ಯ ಕಾಂಗ್ರೆಸ್ (Congress) ಸರ್ಕಾರದಲ್ಲಿ ಲಿಂಗಾಯತ ಸಮುದಾಯದ ಶಾಸಕರಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಜೊತೆಗೆ ಅನೇಕ ಲಿಂಗಾಯತ ಅಧಿಕಾರಿಗಳಿಗೆ ಪ್ರಮುಖ ಹುದ್ದೆಗಳೇ ಸಿಗುತ್ತಿಲ್ಲ. ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಸಿದ್ದರಾಮಯ್ಯ (Siddaramaiah) ವಿರುದ್ದ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ನಿಜಲಿಂಗಪ್ಪ, ಜೆ.ಎಚ್.ಪಾಟೇಲರು (J.S.Patil) ಇದ್ದಾಗ ಎಲ್ಲರೂ ಚೆನ್ನಾಗಿದ್ದರು. ಈಗ ಲಿಂಗಾಯತರು ಕಂಗಾಲಾಗಿದ್ದಾರೆ. ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ನೀಡುತ್ತಿಲ್ಲ. ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ. ಲಿಂಗಾಯತ ಸಮುದಾಯಕ್ಕೆ ಡಿಸಿಎಂ ಹುದ್ದೆ ಸಿಗಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಈಗ ನಾವು ಡಿಸಿಎಂ(DCM) ಆಗಿ ಏನು ಮಾಡಬೇಕು. ಆದರೆ ಸಿಎಂ ಆಗಬೇಕು ಎನ್ನುವ ಮೂಲಕ ಶಾಮನೂರು ಶಿವಶಂಕರಪ್ಪ ಲಿಂಗಾಯತ ಮುಖ್ಯಮಂತ್ರಿ ಪರ ಧ್ವನಿ ಎತ್ತಿದ್ದಾರೆ.

ಇನ್ನು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಯನ್ನಿಟ್ಟುಕೊಂಡು ಟ್ವೀಟ್ (Tweet) ಮಾಡಿರುವ ಬಿಜೆಪಿ(BJP), ತಾವು ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲು ಗೌಡ-ಲಿಂಗಾಯತ-ಬ್ರಾಹ್ಮಣ ಸಮುದಾಯದ ಅಧಿಕಾರಿಗಳನ್ನು ಕಡೆಗಣಿಸಿದ್ದ ಸಿದ್ದರಾಮಯ್ಯ ಈಗಲೂ ಅದನ್ನೇ ಮುಂದುವರಿಸಿದ್ದಾರೆ, ಅದರಲ್ಲಿಯೂ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಕಾಂಗ್ರೆಸ್ನ ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪರವರು ಹೇಳುವ ಮೂಲಕ ಸಿದ್ದರಾಮಯ್ಯರವರ ಜಾತಿ ವಿರೋಧಿ ಮನಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ. ಚುನಾವಣೆ ಸಮಯದಲ್ಲಿ ಲಿಂಗಾಯಿತರೆಲ್ಲರೂ ಭ್ರಷ್ಟರೆಂಬಂತೆ ಹೇಳಿದ್ದ ಸಿದ್ದರಾಮಯ್ಯರವರು, ಈಗ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಿ, ಆ ಸಮುದಾಯದ ವಿರುದ್ಧ ಹಗೆ ಸಾಧಿಸುತ್ತಿರುವುದು ದುರಂತ ಎಂದು ಟೀಕಿಸಿದೆ.