ಬೆಂಗಳೂರು, ಏ. 15: ರಾಜ್ಯದಲ್ಲಿ ದಿನ ದಿನಕ್ಕೂ ಹೆಚ್ಚುತ್ತಿರುವ ಕೊರೊನಾ ಜನಸಾಮಾನ್ಯರಲ್ಲಿ ದೊಡ್ಡ ಆತಂಕ ಸೃಷ್ಟಿಸಿದೆ. ಈ ನಡುವೆ ಕೊರೊನಾ ಲಸಿಕೆಗಳು ಸಿಗುತ್ತಿಲ್ಲ ಎಂಬ ಆತಂಕ ಸಹ ಎಲ್ಲೆಡೆ ಹೆಚ್ಚುತ್ತಿದ್ದು, ಲಸಿಕೆಗಾಗಿ ಸೋಂಕಿತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೆ ಸಾಕ್ಷಿಯೆಂಬಂತೆ ಕಲಬುರ್ಗಿಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯ ಕುಟುಂಬ ಸದಸ್ಯರು ರೆಮಿಡಿಸ್ವಿರ್ ಲಸಿಕೆ ಸಿಗದೆ ಪರದಾಡಿದ ಸಂಗತಿ ರಾಜ್ಯದ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯ ಕುಟುಂಬಸ್ಥರು ರೆಮಿಡಿಸ್ವಿರ್ ಲಸಿಕೆಗಾಗಿ ಇಡೀ ಊರು ಅಲೆದರು ಎಲ್ಲಿಯೂ ಸಿಗದಿರುವುದಕ್ಕೆ ಕುಟುಂಬ ಸದಸ್ಯರು ಕಂಗಾಲಾಗಿದ್ದರು.
ಈ ನಡುವೆ ರೆಮಿಡಿಸ್ವಿರ್ ಕೊರೊತೆ ಇರುವ ಸಂಗತಿ ಸತ್ಯಕ್ಕೆ ದೂರವಾಗಿದ್ದು, ರೆಮ್ ಡಿಸಿವಿಆರ್ ಲಸಿಕೆ ಕೊರತೆ ಇಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರೆಮಿಡಿಸ್ವಿರ್ ಔಷಧದ ಸಮರ್ಪಕ ಪೂರೈಕೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಅನ್ನು ನೋಡಲ್ ಏಜೆನ್ಸಿಯಾಗಿ ನಿಯೋಜಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಹಾಗೂ ಸರ್ಕಾರ ಶಿಫಾರಸ್ಸು ಮಾಡಿರುವ ಸೋಂಕಿತರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಅವಶ್ಯಕ ರೆಮಿಡಿಸ್ವಿರ್ ಔಷಧ ಸರಬರಾಜು ಮಾಡಲು SASTಗೆ ಹೊಣೆಗಾರಿಕೆ ನೀಡಲಾಗಿದೆ.
ಅಲ್ಲದೇ, ಸ್ವಯಂ ಪ್ರೇರಿತರಾಗಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರ ಚಿಕಿತ್ಸೆಗೆ ರೆಮಿಡಿಸ್ವಿರ್ ಔಷಧ ಪೂರೈಸಲು ಉಪ ಔಷಧ ನಿಯಂತ್ರಕ ಕೆಂಪಯ್ಯ ಸುರೇಶ್,
ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ಖಾಸಗಿ ಆಸ್ಪತ್ರೆಗಳು ಸೋಂಕಿತರ SRF ID ಮುಂತಾದ ವಿವರಗಳನ್ನು ಇಮೇಲ್ ಅಥವಾ ವಾಟ್ಸಾಪ್ ಮೂಲಕ ಒದಗಿಸಿ ಔಷಧ ಪಡೆಯಬಹುದು ಎಂದು ತಿಳಿಸಿದ್ದಾರೆ.