ಬೆಂಗಳೂರು: ಸಿದ್ದರಾಮಯ್ಯ ದೇಶನಿಷ್ಠೆ ಬಗ್ಗೆ ನಮಗೆ ಸಂದೇಹವಿದೆ ಎಂಬ ಪೇಜಾವರ ಶ್ರೀಗಳ ಹೇಳಿಕೆಯನ್ನು ಮಾಜಿ ಸಚಿವ ಡಾ.ಎಚ್.ಮಹದೇವಪ್ಪ ಟೀಕಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಕಿಡಿಕಾರಿರುವ ಅವರು, ಈಗಾಗಲೇ ಹಲವು ಬಾರಿ ಹೇಳಿದಂತೆ ಕೆಲ ಕ್ರಿಕೆಟಿಗರು, ಸಿನಿಮಾ ತಾರೆಯರು, ಸೆಲೆಬ್ರಿಟಿಗಳು ಮತ್ತು ಮಾಧ್ಯಮದವರು ಮನುವಾದಿಗಳ ಮುಖವಾಣಿಗಳಾಗಿ ನೇರವಾಗಿ ಮತ್ತು ಪರೋಕ್ಷವಾಗಿ ಕೆಲಸ ಮಾಡುತ್ತಿದ್ದು ಈ ಸಾಲಿಗೆ ಧಾರ್ಮಿಕ ಮಠದ ಗುರುಗಳೂ ಕೂಡಾ ಸೇರ್ಪಡೆ ಆಗಿರುವುದು ಈ ಮೂಲಕ ಸ್ಪಷ್ಟವಾಗಿ ಕಾಣುತ್ತಿದೆ.
ಪೇಜಾವರ ಶ್ರೀಗಳೇ ಜಾತಿ, ಧರ್ಮ ಬೇಧಭಾವವಿಲ್ಲದೇ ಸಮಾಜದ ಅಂಕುಡೊಂಕುಗಳನ್ನು ತಿದ್ದುವುದು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡುವುದು ನಿಮ್ಮ ಗುರಿಯೇ ಹೊರತು ಯಾವುದೋ ನಿರ್ದಿಷ್ಟ ಪಕ್ಷವೊಂದರ ವಕ್ತಾರಿಕೆ ಮಾಡುವುದಲ್ಲ. ಕೃಷ್ಣ ಮಠವು ತಾರತಮ್ಯವಿಲ್ಲದ ಜನರ ನಂಬಿಕೆಯ ತಾಣವೇ ವಿನಃ ಆರ್ ಎಸ್ ಎಸ್ ಕೇಂದ್ರವಲ್ಲ ಎಂದು ಟೀಕಿಸಿದ್ದಾರೆ.
ಇತ್ತೀಚೆಗೆ ಉಡುಪಿಯಲ್ಲಿ ಮಾತನಾಡಿದ್ದ ಪೇಜಾವರ ಶ್ರೀಗಳು, ರಾಮಮಂದಿರಕ್ಕೆ ನಾನು ದೇಣಿಗೆ ನೀಡುವುದಿಲ್ಲ. ಮಂದಿರ ನಿರ್ಮಾಣವಾಗುವ ಜಮೀನು ವಿವಾದಿತ ಸ್ಥಳ ಎಂದು ಹೇಳುವ ಮೂಲಕ ರಾಜ್ಯವ್ಯಾಪಿ ಚರ್ಚೆಗೆ ಕಾರಣವಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿಮ್ಮ ದೇಶನಿಷ್ಠೆಯ ಬಗ್ಗ ಸಂದೇಹವಿದೆ ಎಂದಿದ್ದರು.