ರಾಜ್ಯದ ಜನರ ಆರ್ಶೀವಾದದಿಂದ ಕಾಂಗ್ರೆಸ್(Congress) ಪಕ್ಷ ಮರಳಿ ಅಧಿಕಾರಕ್ಕೆ ಬಂದರೆ, ನಾವು 7 ಕೆಜಿ ಅಲ್ಲ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಆಶ್ವಾಸನೆ ನೀಡಿದರು.

ಬೆಳಗಾವಿ(Belagavi) ಜಿಲ್ಲೆಯ ರಾಮದುರ್ಗ ತಾಲೂಕಿನ ಅವರಾದಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಅನಾವರಣ ಮಾಡಿ ಮಾತನಾಡಿದ ಅವರು, ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಬಡವರಿಗಾಗಿ 15 ಲಕ್ಷ ಮನೆಗಳನ್ನು ಕಟ್ಟಿಸಿದ್ದೇನೆ. ದಲಿತ ಮತ್ತು ಹಿಂದುಳಿದವರಿಗಾಗಿ ಸಾಕಷ್ಟು ಭಾಗ್ಯಗಳನ್ನು ನೀಡಿದ್ದೇನೆ. ನಮ್ಮ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಪೂರೈಸಿತ್ತು.
ಮುಂಬರುವ 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ 7 ಕೆಜಿ ಬದಲಾಗಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇನೆ ಎಂದು ಘೋಷಿಸಿದರು.
ಇನ್ನು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿಲ್ಲ ಬದಲಾಗಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ನೇಮಕ ಮಾಡಲಾಗಿದೆ. ಆರ್ಎಸ್ಎಸ್ನವರು ಹೇಳಿದಂತೆ ಮಾಡುವುದು ಮಾತ್ರ ಅವರ ಕೆಲಸ. ಈ ಬಿಜೆಪಿ ಸರ್ಕಾರಕ್ಕೆ ಮಾನ-ಮರ್ಯಾದೆ ಇಲ್ಲ. ಇಂತಹ ಸರ್ಕಾರ ರಾಜ್ಯಕ್ಕೆ ಬೇಕಾ ಎಂದು ಪ್ರಶ್ನಿಸಿದರು.

ಇನ್ನು ರಾಜ್ಯದಲ್ಲಿ ನಡೆದಿರುವ ಪಿಎಸ್ಐ ನೇಮಕಾತಿಯಲ್ಲಿ 300 ಕೋಟಿ ರೂ. ಹೊಡೆದಿದ್ದಾರೆ. ಅನೇಕ ಅಕ್ರಮಗಳನ್ನು ಈ ಸರ್ಕಾರ ನಡೆಸಿದೆ. ಈ ಸರ್ಕಾರದಿಂದ ಏನೂ ಆಗಲ್ಲ. ನಾನು ನಿಮಗೆಲ್ಲಾ ಕೈಮುಗಿದು ಕೇಳಿಕೊಳ್ಳುತ್ತೇನೆ ದಯವಿಟ್ಟು ಈ ಸರ್ಕಾರವನ್ನು ಬೇರು ಸಮೇತ ಕಿತ್ತು ಹಾಕಿಬೇಕು. ಇದಕ್ಕಾಗಿ ರಾಜ್ಯದ ಜನರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಘೇಂಡಾಮೃಗದಂತ ದಪ್ಪ ಚರ್ಮದ ಸರ್ಕಾರವಿದು.
ಈ ಸರ್ಕಾರಕ್ಕೆ ಜನರ ಭಾವನೆಗಳು ಅರ್ಥವಾಗುವುದಿಲ್ಲ. ಇಂತಹ ಭ್ರಷ್ಟ ಸರ್ಕಾರವನ್ನು ಯಾವ ಕಾಲದಲ್ಲೂ ನಾನು ನೋಡಿಲ್ಲ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದರು.