- ಮರ್ಯಾದೆಗೇಡು ಹತ್ಯೆಗಳಿಗೆ ಬ್ರೇಕ್: ವಿಶೇಷ ಕಾನೂನು (siddaramaiah new special law) ತರಲು ರಾಜ್ಯ ಸರ್ಕಾರ ನಿರ್ಧಾರ
- ಜಾತಿ ಹಾಗೂ ಮದುವೆ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ಸರ್ಕಾರ ಯಾವತ್ತೂ ಸಹಿಸುವುದಿಲ್ಲ ಎಂದು ಎಚ್ಚರಿಕೆ
- ಮಹಿಳಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕೃತ್ಯಗಳಿಗೆ ಶೂನ್ಯ ಸಹಿಷ್ಣುತೆ: ಸಿಎಂ ಸಿದ್ದರಾಮಯ್ಯ
Bengaluru: ರಾಜ್ಯದಲ್ಲಿ ನಡೆಯುತ್ತಿರುವ ಮರ್ಯಾದೆಗೇಡು ಹತ್ಯೆ ಪ್ರಕರಣಗಳಿಗೆ (siddaramaiah new special law) ಕಟ್ಟುನಿಟ್ಟಾದ ಕಡಿವಾಣ ಹಾಕುವ ಉದ್ದೇಶದಿಂದ ವಿಶೇಷ ಕಾನೂನು ರೂಪಿಸುವ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಯುವತಿ ಮಾನ್ಯ ಅವರ ಹತ್ಯೆ ಪ್ರಕರಣದ ಹಿನ್ನೆಲೆ ಈ ವಿಚಾರ ಸಾರ್ವಜನಿಕ ಚರ್ಚೆಗೆ ಬಂದಿದೆ.
ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಪ್ರತಿಕ್ರಿಯಿಸಿರುವ ಸಿಎಂ, ಈ ಪ್ರಕರಣದ ತ್ವರಿತ ವಿಚಾರಣೆ ಹಾಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸುವುದೇ ಸರ್ಕಾರದ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ.

ಸಮಾಜದಲ್ಲಿ ಮಾನವೀಯತೆ ಕಳೆದುಕೊಳ್ಳುವಂತಹ ಇಂತಹ ಕ್ರೂರ ಕೃತ್ಯಗಳನ್ನು (siddaramaiah new special law) ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂಬ ಕಠಿಣ ಸಂದೇಶವನ್ನೂ ಅವರು ನೀಡಿದ್ದಾರೆ.
ಮಾನ್ಯಳ ಹತ್ಯೆ ಪ್ರಕರಣವು ಕೇವಲ ಒಂದು ಕುಟುಂಬಕ್ಕೆ ಸೀಮಿತವಾದ ದುರಂತವಲ್ಲ, ಇದು ಸಮಾಜದ ಅಂತರಾಳದಲ್ಲಿರುವ ಜಾತಿ,
ಅಸಮಾನತೆ ಮತ್ತು ಮಹಿಳಾ ಸ್ವಾತಂತ್ರ್ಯಕ್ಕೆ ವಿರೋಧಿ ಮನಸ್ಥಿತಿಯ ಭೀಕರ ಪ್ರತಿಫಲ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಕರಣದಲ್ಲಿ ದಲಿತ ದೌರ್ಜನ್ಯವೂ ದಾಖಲಾಗಿರುವುದರಿಂದ, ಅಟ್ರಾಸಿಟಿ ಕಾಯ್ದೆಯಡಿ 60 ದಿನಗಳೊಳಗೆ ದೋಷಾರೋಪಪಟ್ಟಿ
ಸಲ್ಲಿಸುವುದು ಕಡ್ಡಾಯವಾಗಿದೆ.
ಇದಕ್ಕಾಗಿ ಸರ್ಕಾರ ವಿಶೇಷ ಪ್ರಾಸಿಕ್ಯೂಟರ್ ನೇಮಕ ಮಾಡುವ ಮೂಲಕ ನ್ಯಾಯಾಂಗ ಪ್ರಕ್ರಿಯೆ ವೇಗಗೊಳಿಸಲು ಕ್ರಮ ಕೈಗೊಂಡಿದೆ.
ಜೊತೆಗೆ, ತ್ವರಿತಗತಿ ನ್ಯಾಯಾಲಯ ಸ್ಥಾಪಿಸಿ ಪ್ರಕರಣವನ್ನು ಶೀಘ್ರವಾಗಿ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಸಕ್ರಿಯವಾಗಿದೆ ಎಂದು ತಿಳಿಸಲಾಗಿದೆ.
ಮಹಿಳೆಯೊಬ್ಬಳು ತನ್ನ ಜೀವನದ ಬಗ್ಗೆ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಹಕ್ಕನ್ನು ಕಸಿದುಕೊಳ್ಳುವುದು, ಮದುವೆಗೆ ಬಲವಂತಪಡಿಸುವುದು
ಅಥವಾ ನಿರಾಕರಣೆಯ ಕಾರಣಕ್ಕೆ ಹಿಂಸೆಗೆ ಒಳಪಡಿಸುವುದು ಅತ್ಯಂತ ಅಮಾನುಷ ಕೃತ್ಯ ಎಂದು ಸಿಎಂ ತೀವ್ರವಾಗಿ ಖಂಡಿಸಿದ್ದಾರೆ.
ಜಾತಿ ಆಧಾರಿತ ಹಲ್ಲೆ, ದೌರ್ಜನ್ಯ ಮತ್ತು ಮರ್ಯಾದೆಗೇಡು ಹತ್ಯೆಗಳು ಇಡೀ ಮಾನವ ಸಮಾಜ ತಲೆತಗ್ಗಿಸುವಂತಹ ಅಪರಾಧಗಳು ಎಂದು ಅವರು ಹೇಳಿದ್ದಾರೆ.
ಇಂತಹ ಕೃತ್ಯಗಳು ಮರುಕಳಿಸದಂತೆ ಕಾನೂನು ಮಾತ್ರವಲ್ಲ, ಸಮಾಜದಲ್ಲಿಯೂ ಜಾಗೃತಿ ಮೂಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಭವಿಷ್ಯದಲ್ಲಿ ಇಂತಹ ಘಟನೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ವಿಶೇಷ ಕಾನೂನು ರೂಪಿಸುವ ಬಗ್ಗೆ ಮುಂದಿನ
ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಈ ಕಾನೂನು ಕೇವಲ ಶಿಕ್ಷೆಗೆ ಸೀಮಿತವಾಗದೆ, ಮುನ್ನೆಚ್ಚರಿಕೆ, ಜಾಗೃತಿ ಮತ್ತು ಸಾಮಾಜಿಕ ಬದಲಾವಣೆಗೆ ಸಹಕಾರಿಯಾಗುವಂತೆ
ರೂಪಿಸಲಾಗುತ್ತದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಜನರಲ್ಲಿ ಕಾನೂನಿನ ಭಯ ಮಾತ್ರವಲ್ಲ, ಕಾನೂನಿನ ಅರಿವು ಮತ್ತು ಮಾನವೀಯ ಮೌಲ್ಯಗಳ ಅರಿವೂ ಮೂಡಬೇಕು ಎಂಬುದು
ಸರ್ಕಾರದ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತ, ಈ ವಿಷಯದಲ್ಲಿ ವಿರೋಧ ಪಕ್ಷ ಬಿಜೆಪಿ ಸರ್ಕಾರದ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದೆ. ಬಿಜೆಪಿ ನಾಯಕರು ಈಗಾಗಲೇ
ದಲಿತ ದೌರ್ಜನ್ಯ ಹಾಗೂ ಹತ್ಯೆ ತಡೆಗೆ ಸಾಕಷ್ಟು ಕಾನೂನುಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೃತ ಮಾನ್ಯ ಅವರ ಗ್ರಾಮಕ್ಕೆ ಭೇಟಿ ನೀಡಿದ ಬಿಜೆಪಿ ಸಂಸದ ಗೋವಿಂದ ಕಾರಜೋಳ, ಹೊಸ ಮಸೂದೆ ತರುವುದರಿಂದ
ಯಾವುದೇ ಪ್ರಯೋಜನವಿಲ್ಲ, ಇದ್ದ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಹೇಳಿದ್ದಾರೆ.
ಇದೇ ಧಾಟಿಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕೂಡ ಹೊಸ ಕಾನೂನಿನ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಈ ನಡುವೆ, ಸರ್ಕಾರ ಮತ್ತು ವಿಪಕ್ಷದ ನಡುವಿನ ಈ ಚರ್ಚೆ ರಾಜ್ಯ ರಾಜಕಾರಣದಲ್ಲಿ ಹೊಸ ತಿರುವು ಪಡೆದುಕೊಂಡಿದ್ದು,
ಮರ್ಯಾದೆಗೇಡು ಹತ್ಯೆ ತಡೆಗೆ ಯಾವ ಮಾರ್ಗ ಹೆಚ್ಚು ಪರಿಣಾಮಕಾರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಇದನ್ನು ಓದಿ : https://vijayatimes.com/quarry-explosion-kills-leopard/