ಕೋವಿಡ್-19 ವೈದ್ಯಕಿಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ನಿರಂತರ ಆರೋಪ ಮಾಡುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಿಎಸ್‍ವೈ ಸರ್ಕಾರದ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ.
ನಿನ್ನೆಯಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಕೋವಿಡ್-19 ಉಪಕರಣಗಳ ಖರೀದಿಯಲ್ಲಿ 2000 ಕೋಟಿ ಅವ್ಯವಹಾರ ನಡೆದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈ ನಡುವೆ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ವೈದ್ಯಕೀಯ ಉಪಕರಣಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಭಯವೇಕೆ? ಸಚಿವರುಗಳು ಸತ್ಯವಂತರು ಏನ್ನುವುದಾದರೆ ತನಿಖೆ ಬೇಡ ಎನ್ನುವುದೇಕೆ? ಇದು ಭಂಡತನದ ಪರಮಾವಧಿ ಕಿಡಿಕಾರಿದರು. ಅಲ್ಲದೇ ಈ ವಿಷಯದಲ್ಲಿ ಜನರಿಗೆ ಸತ್ಯಾಸತ್ಯತೆ ಗೊತ್ತಾಗಬೇಕು ಎಂದರೆ ನ್ಯಾಯಾಂಗ ತನಿಖೆಯಾಗಲಿ. ಅದಕ್ಕೆ ಭಯವೇಕೆ? ಸತ್ಯ ಹೊರ ಬಂದರೆ ಜನರೇ ತೀರ್ಮಾನ ಮಾಡುತ್ತಾರೆ. ನಮ್ಮ ಮತ್ತು ಅವರ ದಾಖಲೆಗಳು ನ್ಯಾಯಾಂಗ ತನಿಖೆಯ ಮುಂದೆ ಬರಲಿ ಎಂದು ಆಗ್ರಹಿಸಿದರು.
ನಾವು ಸುಳ್ಳು ಹೇಳುತ್ತೇವೆ, ಅವರೇ ಸತ್ಯವಂತರು ಎನ್ನುವುದಾದರೆ ತನಿಖೆ ಬೇಡ ಎನ್ನುವುದೇಕೆ? ಅಂದು ಭಂಡತನ ಅಲ್ಲವೇ? ಹೀಗಾಗಿ ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆಯಾಗಲಿ ಎಂದು ಮತ್ತೆ ಒತ್ತಾಯಿಸುತ್ತೇನೆ. ತನಿಖೆಗೆ ಸರ್ಕಾರ ಆದೇಶ ಮಾಡುವುದಿಲ್ಲ ಎಂದಾದರೆ ಅವರು ಕಳ್ಳತನ ಮಾಡಿದ್ದಾರೆ ಎಂದು ಅರ್ಥ ಎಂದು ಆರೋಪಿಸಿದರು.
ನಿನ್ನೆ ಸುದ್ದಿಗೋಷ್ಠಿಯಲ್ಲಿ ನಾವು ಕೊಟ್ಟಿರುವುದು ಸರ್ಕಾರಿ ದಾಖಲೆಗಳೇ. ಅದು ಸುಳ್ಳು ಎನ್ನುವುದಾದರೆ ನಿನ್ನೆ ಸರ್ಕಾರದ ಪರವಾಗಿ ಪತ್ರಿಕಾಗೋಷ್ಠಿ ನಡೆಸಿದವರು ಮಂತ್ರಿಗಳಾಗಿರುವುದೇ ಸುಳ್ಳಾ? ಸರ್ಕಾರದಲ್ಲಿ ಇರುವ ದಾಖಲೆಗಳೇ ಸುಳ್ಳಾ ಎಂದು ಪ್ರಶ್ನಿಸಿದ ಅವರು, ನಾವು ಕೊಟ್ಟಿರುವ ದಾಖಲೆಗಳನ್ನು ನಾನು ಸೃಷ್ಟಿ ಮಾಡಿದ್ದಲ್ಲ. ಕೇಂದ್ರ ಸರ್ಕಾರ ಪಿಎಂಒ ಕಚೇರಿಯಿಂದ ಹೊರಡಿಸಿರುವ ಪ್ರಕಟಣೆಯಲ್ಲಿ 50 ಸಾವಿರ ವೆಂಟಿಲೇಟರ್ ಗಳನ್ನು ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಖರೀದಿಸಿದ್ದು, ಇದಕ್ಕಾಗಿ ಎರಡು ಸಾವಿರ ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದೆ.
ಕೇಂದ್ರ ಸರ್ಕಾರ ಹೇಳಿರುವುದು ಸುಳ್ಳು. ಅದು ಸುಳ್ಳು. ನಮಗೆ ಕೊಟ್ಟಿರುವ ವೆಂಟಿಲೇಟರ್‍ಗಳೂ ಕಳಪೆ ಎಂದು ಮಂತ್ರಿಗಳು ಹೇಳಲಿ. ಗುಣಮಟ್ಟದ ವಿಚಾರಕ್ಕೆ ಬರುವುದಾದರೆ ಕಾರುಗಳಲ್ಲಿ ಐಷಾರಾಮಿಯೂ ಇರುತ್ತದೆ. ಸಾಮಾನ್ಯದ್ದೂ ಇರುತ್ತದೆ. ಕೇಂದ್ರ ಸರ್ಕಾರ ಸಹ 18 ಲಕ್ಷ ರೂ. ವೆಚ್ಚದಲ್ಲಿಯೇ ವೆಂಟಿಲೇಟರ್ ಖರೀದಿ ಮಾಡಬುದಿತ್ತು. ಕೇಂದ್ರ ಸಕಾರ 4 ಲಕ್ಷ ರೂ. ವೆಚ್ಚದಲ್ಲಿ ಖರೀದಿ ಮಾಡಿವುದು ಸುಳ್ಳೇ? ಇದಕ್ಕೆ ಮಂತ್ರಿಗಳು ನೀಡುವ ಉತ್ತರ ಏನು ಎಂದು ಪ್ರಶ್ನಿಸಿದರು.ಕಾರ್ಮಿಕ ಇಲಾಖೆಯಲ್ಲಿ ಒಂದು ಸಾವಿರ ಕೋಟಿ ರೂ.ಗಳ ಅವ್ಯವಹಾರ ಆಗಿದೆ ಎಂದು ಹೇಳಿಲ್ಲ. ಅಷ್ಟು ಖರ್ಚಾಗಿದೆ ಎಂದಿದ್ದೇನೆ. ಆದರೆ ಫುಡ್ ಪ್ಯಾಕೇಟ್ ಕೊಡುವಲ್ಲಿ ಅವ್ಯವಹಾರ ಆಗಿದೆ. ಒಂದು ಸಾವಿರ ಕೋಟಿ ಖರ್ಚಾಗಿದೆ ಅದಕ್ಕೆ ಲೆಕ್ಕ ಕೊಡಿ ಅಂದೆ. ಇವರು 324 ಕೋಟಿ ಮಾತ್ರ ಖರ್ಚು ಆಗಿದೆ. ಎನ್ನುತ್ತಾರೆ. ಆದರೆ ನಿನ್ನೆ ಮಂತ್ರಿಗಳೇ 2118 ಕೋಟಿ ರೂ. ವೆಚ್ಚ ಎಂದಿದ್ದು ಏಕೆ. ಅವರೇ ಸುಳ್ಳು ಲೆಕ್ಕ ಕೊಡುತ್ತಿದ್ದಾರೆ ಎಂಬುದು ಇದರ ಅರ್ಥ ಎಂದರು.