PSI ನೇಮಕಾತಿ ಹಗರಣದಲ್ಲಿ(PSI Recruitment Scam) ಅಧಿಕಾರಿಗಳನ್ನು ಮಾತ್ರ ಹೊಣೆ ಮಾಡಿ ಜಾರಿಕೊಳ್ಳುವುದು ಬೇಡ. ಈ ಹಗರಣಕ್ಕೆ ಅಧಿಕಾರಿಗಳಷ್ಟೇ ಗೃಹ ಸಚಿವ(Home Minister) ಆರಗ ಜ್ಞಾನೇಂದ್ರ(Araga Jnanendra) ಅವರೂ ಕಾರಣ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಅವರು ಮೊದಲು ಆರಗ ಜ್ಞಾನೇಂದ್ರ ಅವರನ್ನು ಸಂಪುಟದಿಂದ ಕಿತ್ತುಹಾಕಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಆಗ್ರಹಿಸಿದ್ದಾರೆ.

ಪಿಎಸ್ಐ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಎಡಿಜಿಪಿ(ADGP) ಅಮೃತ್ ಪೌಲ್(Amruth Paul) ಬಂಧನದ ಕುರಿತು ಟ್ವೀಟ್(Tweet) ಮಾಡಿರುವ ಅವರು, ಕಪಾಟಿನೊಳಗಿಂದ ಒಂದೊಂದೇ ಅಸ್ತಿಪಂಜರಗಳು ಹೊರಗೆ ಬೀಳುತ್ತಿವೆ. PSI ನೇಮಕಾತಿ ಹಗರಣದಲ್ಲಿ ಅಮೃತ್ ಪೌಲ್ ಬಂಧನವೇ ಇದಕ್ಕೆ ಸಾಕ್ಷಿ. ಹಗರಣವೇ ನಡೆದಿಲ್ಲ ಎಂದು ಮೈಮೇಲೆ ಬರುತ್ತಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಈಗ ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಇದೇ ವೇಳೆ ಶಿವಮೊಗ್ಗದ(Shimogga) ಆನವಟ್ಟಿಯಲ್ಲಿ ನಾಟಕ ಪ್ರದರ್ಶನಕ್ಕೆ ತಡೆಯೊಡ್ಡಿರುವುದನ್ನು ಖಂಡಿಸಿರುವ ಅವರು, ಸತ್ಯ, ನ್ಯಾಯ ಮತ್ತು ನಿಜವಾದ ಧರ್ಮದ ಪರವಾಗಿರುವ ಸಾಹಿತ್ಯ,ನಾಟಕ ಕಲೆ ಮೊದಲಾದ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ಕಂಡರೆ ಆರ್ ಎಸ್ ಎಸ್(RSS) ಮತ್ತು ಪರಿವಾರಕ್ಕೆ ಭಯ. ಈ ದಾಳಿಗೂ ಇದೇ ಕಾರಣ. ಇಂತಹ ಅಡ್ಡಿ-ಆತಂಕಗಳನ್ನು ಎದುರಿಸುವ ಚೈತನ್ಯ ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ಇದೆ. ಶಿವಮೊಗ್ಗದ ಅನವಟ್ಟಿಯಲ್ಲಿ ಕನ್ನಡ ನಾಟಕ ‘ಜತೆಗಿರುವನು ಚಂದಿರ’ ಪ್ರದರ್ಶನಕ್ಕೆ ಆರ್ಎಸ್ಎಸ್ ಅಡ್ಡಿಪಡಿಸಿರುವುದು ಸಾಂಸ್ಕೃತಿಕ ಭಯೋತ್ಪಾದನೆಯಲ್ಲದೆ ಮತ್ತೇನಲ್ಲ.

ಈ ಗೂಂಡಾಗಿರಿಯಲ್ಲಿ ಪಾಲುದಾರರಾದ ಎಲ್ಲಾ ದುಷ್ಕರ್ಮಿಗಳನ್ನು ಸರ್ಕಾರ ಈ ಕೂಡಲೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದ್ದಾರೆ.