ಬಿಜೆಪಿ ಸರ್ಕಾರದ(BJP Government) ಧರ್ಮರಾಜಕಾರಣ, ಕೋಮುವಾದ, ಸಂವಿಧಾನ(Constitution) ಮತ್ತು ಪ್ರಜಾಪ್ರಭುತ್ವ(Democracy) ವಿರೋಧಿ ನಡವಳಿಕೆಗಳ ವಿರುದ್ಧ ನಾಡಿನ ಜನ ಜಾಗೃತರಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ(Vidhanasabha Election) ರಾಜ್ಯದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್(Congress) ಕೈಹಿಡಿಯಲಿದ್ದಾರೆ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.
ವಿಧಾನಪರಿಷತ್ ಚುನಾವಣೆ(Vidhanparishath Election) ಫಲಿತಾಂಶ ಘೋಷಣೆ ನಂತರ ಸರಣಿ ಟ್ವೀಟ್(Tweet) ಮಾಡಿರುವ ಅವರು, ಚುನಾವಣೆ ನಡೆದ 4 ಕ್ಷೇತ್ರಗಳಲ್ಲಿ ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನ ಒಬ್ಬ ಅಭ್ಯರ್ಥಿಯೂ ಗೆದ್ದಿರಲಿಲ್ಲ, ಆದರೆ ಈ ಬಾರಿ ಎರಡು ಸ್ಥಾನಗಳನ್ನು ಗೆಲ್ಲುವಲ್ಲಿ ಪಕ್ಷ ಯಶಸ್ವಿಯಾಗಿದೆ. ಪಕ್ಷದ ಗೆಲುವಿಗೆ ನಮ್ಮ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರ ಸಂಘಟಿತ ಪ್ರಯತ್ನ ಕಾರಣ. ಜಯಗಳಿಸಿದ ವಾಯುವ್ಯ ಶಿಕ್ಷಕರ ಕ್ಷೇತ್ರದ ನಮ್ಮ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಅವರಿಗೆ ಮತ್ತು ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಮಧು ಜಿ. ಮಾದೇಗೌಡ ಅವರಿಗೆ ಅಭಿನಂದನೆಗಳು.
ನಿಮ್ಮ ಹೋರಾಟ ಮತ್ತು ಜನಪರ ಕಾರ್ಯಗಳಿಗೆ ಕಾಂಗ್ರೆಸ್ ಪಕ್ಷ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ, ಆಶೀರ್ವದಿಸಿದ ಎಲ್ಲ ಪದವೀಧರ ಮತದಾರರು ಹಾಗೂ ಶಿಕ್ಷಕ ಬಂಧುಗಳಿಗೆ ಧನ್ಯವಾದಗಳು. ಈ ಫಲಿತಾಂಶ ನಾಡಿನ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪರವಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ವಿಧಾನ ಪರಿಷತ್ ಚುನಾವಣೆಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ 4 ಸ್ಥಾನಗಳಲ್ಲಿ ಎರಡು ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಪಕ್ಷದ ಗೆಲುವಿಗೆ ಕಾರಣರಾದ ಎಲ್ಲಾ ಕಾರ್ಯಕರ್ತರಿಗೆ, ಮುಖಂಡರಿಗೆ, ಶಾಸಕರಿಗೆ, ಸಂಸದರಿಗೆ ನನ್ನ ಧನ್ಯವಾದಗಳು ಎಂದು ತಿಳಿಸಿದ್ದಾರೆ.