ಬೆಂಗಳೂರು : ನಮ್ಮ ದೇಶದಲ್ಲಿರುವ ಪರಿಶಿಷ್ಟ ಜಾತಿ(Scheduled Caste) ಮತ್ತು ಪರಿಶಿಷ್ಟ ಪಂಗಡ(Scheduled Tribe) ಸಮುದಾಯಗಳಿಗೆ ತಿಳುವಳಿಕೆ ಕಡಿಮೆ. ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹೀಗಾಗಿ ಗುಲಾಮಗಿರಿ ಮನಸ್ಥಿತಿ ಇದ್ದು, ಸ್ವಾಭಿಮಾನ ಮನಸ್ಥಿತಿ ಇನ್ನೂ ಬಂದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅಭಿಪ್ರಾಯಪಟ್ಟರು.
ಬೆಂಗಳೂರಿನ(Benagluru) ರವೀಂದ್ರ ಕಲಾಕ್ಷೇತ್ರದಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್(Dr B.R Ambedkar) ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸುವ ದೃಷ್ಟಿಯಿಂದಲೇ ಸಂವಿಧಾನದ(Constitution) ಮೂಲಕ ಮೀಸಲಾತಿ ನೀಡಿದರು. ಎಸ್ಸಿ-ಎಸ್ಟಿ ಮತ್ತು ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ನೀಡಬೇಕೆಂದು ಸಂವಿಧಾನದಲ್ಲಿ ಉಲ್ಲೇಖವಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಒಂದೇ ದಿನದಲ್ಲಿ ಮೇಲ್ವರ್ಗದವರಿಗೆ ಶೇಕಡಾ 10ರಷ್ಟು ಮೀಸಲಾತಿ ನೀಡಿದರು.
ನರೇಂದ್ರ ಮೋದಿಯವರ ಈ ಕ್ರಮವನ್ನು ಯಾರೂ ಪ್ರಶ್ನೆ ಮಾಡಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಇನ್ನು ಮಂಡಲ್ ಆಯೋಗ ರಚಿಸಿದಾಗ ಹಿಂದುಳಿದವರಿಗೆ ಶೇ.27 ರಷ್ಟು ಮೀಸಲಾತಿ ಸಿಕ್ಕಿದಾಗ ಸಂಭ್ರಮಿಸಬೇಕಾದವರೇ ಅದನ್ನು ವಿರೋಧಿಸಿದರು. ಮಂಡಲ್ ಆಯೋಗವನ್ನು ಎಸ್ಸಿ-ಎಸ್ಟಿ ಮತ್ತು ಹಿಂದುಳಿದ ಸಮುದಾಯದವರು ವಿರೋಧಿಸಿದ್ರು. ಹೀಗಾಗಿ ಇಂದಿಗೂ ಕೂಡಾ ಹಿಂದುಳಿದವರು, ಎಸ್ಸಿ ಮತ್ತು ಎಸ್ಟಿ ಸಮುದಾಯದವರಿಗೆ ತಿಳುವಳಿಕೆ ಇಲ್ಲ.
ಇನ್ನು ಗುಲಾಮಗಿರಿ ಮನಸ್ಥಿತಿ ಇದೆ. ಸ್ವಾಭಿಮಾನ ಮನಸ್ಥಿತಿ ಇನ್ನೂ ಬಂದಿಲ್ಲ. ಒಬ್ಬ ಬ್ರಾಹ್ಮಣ ಅಡುಗೆ ಭಟ್ಟನಾಗಿ ಬಂದರೂ ಕೈಮುಗಿದು ಗೌರವ ಕೊಟ್ಟು, ನಮಸ್ಕಾರ ಮಾಡ್ತೀವಿ. ಆದರೆ ಅದೇ ಒರ್ವ ಪರಿಶಿಷ್ಟ ಜಾತಿಯವನು ಚೆನ್ನಾಗಿ ಓದಿಕೊಂಡು, ಶ್ರೀಮಂತನಾದರು, ಅವನನ್ನು ಏನಯ್ಯಾ.. ಎಂದು ಅಗೌರವದಿಂದಲೇ ಕಾಣುತ್ತಾರೆ. ಇದನ್ನೆಲ್ಲಾ ನೋಡುತ್ತಾ ಸುಮ್ಮನೆ ಕೂರಬಾರದು. ನಾವೆಲ್ಲಾ ಸಮಾನತೆಗಾಗಿ ಹೋರಾಡಬೇಕು ಎಂದರು.