ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಬಿಜೆಪಿ(BJP) ಎರಡು, ಕಾಂಗ್ರೆಸ್(Congress) ಒಂದು ಮತ್ತು ಹೊಂದಾಣಿಕೆ ಮೂಲಕ ಜೆಡಿಎಸ್(JDS) ಒಂದು ಸ್ಥಾನವನ್ನು ಗೆಲ್ಲಲು ಅವಕಾಶವಿತ್ತು.

ಆದರೆ ಇದೀಗ ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ರೂಪಿಸಿದ ಹೊಸತಂತ್ರದ ಪರಿಣಾಮ ಜೆಡಿಎಸ್ಗೆ ಪೀಕಲಾಟ ಶುರುವಾಗಿದೆ. ದಿಢೀರನೇ ಸಿದ್ದು ಹೂಡಿದ ತಂತ್ರ ದೇವೇಗೌಡರಿಗೆ ತಲೆನೋವಾಗಿದೆ. ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ 2ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇನ್ನೊಂದೆಡೆ ಬಿಜೆಪಿ ಕೂಡಾ ದಿಢೀರನೇ 3ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಹೀಗಾಗಿ ಈಗ ಜೆಡಿಎಸ್ ಅಭ್ಯರ್ಥಿ ಗೆಲ್ಲುವುದು ಕಷ್ಟವಾಗಿದೆ. ಬಿಜೆಪಿಗೆ ವಿಧಾನಸಭೆಯಲ್ಲಿ 122 ಸದಸ್ಯರ ಬಲವಿದ್ದು, 2 ಸ್ಥಾನಗಳನ್ನು ಗೆಲ್ಲಬಹುದು.
ಕಾಂಗ್ರೆಸ್ಗೆ 69 ಸದಸ್ಯರ ಬಲವಿದ್ದು 1 ಸ್ಥಾನವನ್ನು ಗೆಲ್ಲಬಹುದು. ಆದರೆ 32 ಸದಸ್ಯರ ಬಲ ಹೊಂದಿರುವ ಜೆಡಿಎಸ್ ಅಭ್ಯರ್ಥಿ ಗೆಲ್ಲಲು ಇನ್ನೂ 13 ಸದಸ್ಯರ ಬೆಂಬಲ ಅಗತ್ಯವಿದೆ. ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು 45 ಸದಸ್ಯರ ಬೆಂಬಲಬೇಕು. ಬಿಜೆಪಿಯ 90 ಸದಸ್ಯರ ಬಲದಿಂದ 2 ಅಭ್ಯರ್ಥಿಗಳು ಗೆಲ್ಲುತ್ತಾರೆ. ಉಳಿದ 32 ಸದಸ್ಯರ ಜೊತೆ ವಿಪಕ್ಷದ 13 ಸದಸ್ಯರು ಬೆಂಬಲ ನೀಡಿದರೆ 3ನೇ ಅಭ್ಯರ್ಥಿಯೂ ಗೆಲ್ಲಬಹುದು. ಅದೇ ರೀತಿ ಕಾಂಗ್ರೆಸ್ನ 2ನೇ ಅಭ್ಯರ್ಥಿ ಗೆಲ್ಲಲು 20 ಮತಗಳ ಕೊರತೆಯಾಗಲಿದೆ. ಇನ್ನು ಜೆಡಿಎಸ್ಗೆ ಇರುವ ಒರ್ವ ಅಭ್ಯರ್ಥಿಯನ್ನು ಗೆಲ್ಲಿಸಲು 13 ಮತಗಳ ಕೊರತೆಯಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ಕೊನೆ ಕ್ಷಣದಲ್ಲಿ ನಾಲ್ಕನೇ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಪರಿಣಾಮ ಜೆಡಿಎಸ್ಗೆ ಗೆಲುವು ಕಷ್ಟವಾಗಿದೆ. ಹೀಗೆ ಕೊನೆ ಕ್ಷಣದಲ್ಲಿ ಜೆಡಿಎಸ್ಗೆ ಆಘಾತ ನೀಡಿದ್ದು ಸಿದ್ದರಾಮಯ್ಯ ಎನ್ನಲಾಗಿದೆ. ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ರನ್ನು ಭೇಟಿಯಾಗಿ ಬೆಂಬಲ ಕೋರಿದ್ದರು. ಇದನ್ನರಿತ ಸಿದ್ದರಾಮಯ್ಯ ಕೆ.ಸಿ.ವೇಣುಗೋಪಾಲ ಜೊತೆ ಚರ್ಚೆ ನಡೆಸಿ, ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡದಂತೆ 2ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಹೈಕಮಾಂಡ್ನಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡರು.
ಜೆಡಿಎಸ್ ಈಗ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂದು ಸಿದ್ದು ಭಾವಿಸಿದ್ದರು. ಸಿದ್ದರಾಮಯ್ಯ ತಂತ್ರವರಿತ ಬಿಜೆಪಿ ಕೂಡಾ 3ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. ಹೀಗಾಗಿ ಜೆಡಿಎಸ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡರ ಬಾಗಿಲು ಮುಚ್ಚಿದೆ.