ಚಂದದ ಜೀವನ ನಡೆಸಲು ದೈಹಿಕ ಅರೋಗ್ಯದಷ್ಟೇ ಮಾನಸಿಕ ಅರೋಗ್ಯವೂ(Simple Tips To Mental Health) ಮುಖ್ಯವಾಗುತ್ತದೆ. ಹಾಗಾಗಿ ನಿಮ್ಮ ಮಾನಸಿಕ ಅರೋಗ್ಯವನ್ನು ಕಾಪಾಡಿಕೊಳ್ಳಲು ಈ ಸರಳ ಸೂತ್ರಗಳನ್ನು ಪಾಲಿಸಿ.

ಹಿತ-ಮಿತ-ಶಿಸ್ತಿನ ಆಹಾರ ಸೇವನೆ : ಬೆಳಗಿನ ಉಪಹಾರ ಮಧ್ಯಾಹ್ನ ರಾತ್ರಿಯ ಊಟದ ಸಮಯವನ್ನು ನಿಗದಿ ಮಾಡಿಕೊಳ್ಳಿ(Simple Tips To Mental Health). ಹಣ್ಣು, ತರಕಾರಿ, ಬೇಳೆ ಕಾಳುಗಳು, ರಾಗಿ, ಗೋಧಿ ಪದಾರ್ಥಗಳನ್ನು ಹೆಚ್ಚು ಸೇವಿಸಿ.
ಮಾಂಸಾಹಾರಿಗಳು ಮೀನು, ಮೊಟ್ಟೆ, ಕೋಳಿಮಾಂಸ ಸೇವಿಸಿ. ಕೆಂಪು ಮಾಂಸ ಕಡಿಮೆ ತಿನ್ನಿ, ಜಂಕ್-ಫುಡ್ ಬೇಡ. ಹೊರಗಡೆ ಆಹಾರ ಸೇವನೆ ತಗ್ಗಿಸಿ ಮನೆ ಊಟವನ್ನೇ ಹೆಚ್ಚು ಮಾಡಿ. ಬಾಯಿ ರುಚಿಗಿಂತ ಪೌಷ್ಟಿಕಾಂಶಗಳಿಗೆ ಗಮನಕೊಡಿ.
ಬೇಗ ಮಲಗಿ ಬೇಗ ಏಳಿ. ಆರೇಳು ಗಂಟೆಗಳ ಭಂಗವಿಲ್ಲದ ನಿದ್ರೆ ಮಾಡಿ. ಮಲಗುವ ಸ್ಥಳ ಸ್ವಚ್ಛವಾಗಿರಲಿ ಒಳ್ಳೆಯ ಗಾಳಿ ಸಂಚಾರವಿರಲಿ.
ಇದನ್ನೂ ಓದಿ : https://vijayatimes.com/mallikarjun-kharge-strike/
ಪ್ರೀತಿ-ಸ್ನೇಹ-ವಿಶ್ವಾಸ : ಮನೆಯವರೊಡನೆ, ನೆರೆಹೊರೆ, ಬಂಧು-ಮಿತ್ರರು, ಸಹಪಾಠಿ- ಸಹೋದ್ಯೋಗಿಗಳೊಡನೆ ಪ್ರೀತಿ-ಸ್ನೇಹ ವಿಶ್ವಾಸದಿಂದಿರಿ. ಜೊತೆಯಾಗಿ ಮಾಡಿ ಸಂತೋಷಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಿ.
ಹಬ್ಬ-ಹರಿದಿನಗಳನ್ನು ಒಟ್ಟಾಗಿ ಆಚರಿಸಿ. ಇತರರ ಒಳ್ಳೆಯ ನಡೆ-ನುಡಿಗಳನ್ನು ಮೆಚ್ಚಿ ಶ್ಲಾಘಿಸಿ. ಅನಗತ್ಯವಾಗಿ, ಬಹಿರಂಗವಾಗಿ ಟೀಕಿಸಬೇಡಿ. ನಿಮ್ಮ ಅನುಭವ-ಅನಿಸಿಕೆ ಭಾವನೆಗಳನ್ನು ಆತ್ಮೀಯರಲ್ಲಿ ಹಂಚಿಕೊಳ್ಳಿ.
ಅತಿಯಾದ ಆಸೆ ಆಕಾಂಕ್ಷೆಗಳಿಗೆ ಕಡಿವಾಣ ಹಾಕಿ : ನಿಮ್ಮ ಇತಿ ಮಿತಿಯಲ್ಲಿ ಆಸೆಗಳಿರಲಿ. ಲಭ್ಯವಿರುವುದರಲ್ಲಿ ತೃಪ್ತಿ ಇರಲಿ ಸರಳ ಜೀವನದಿಂದ ನೆಮ್ಮದಿ.
ಅತಿಯಾದ ಭೋಗ-ಭಾಗ್ಯ ಆಡಂಬರ-ಪ್ರತಿಷ್ಠೆಗಳು ಸುಖಕ್ಕಿಂತ ದುಃಖವನ್ನೇ ತರುತ್ತವೆ ಎನ್ನುವುದು ನೆನಪಿರಲಿ.

ಉದ್ಯೋಗದಲ್ಲಿ ತೃಪ್ತಿ ಇರಲಿ : ಆಯ್ದುಕೊಂಡ ಉದ್ಯೋಗವನ್ನು ಪ್ರೀತಿಯಿಂದ ಮಾಡಿ. ಉದ್ಯೋಗ ಸ್ಥಳದಲ್ಲಿ ಎಲ್ಲರೊಡನೆ ಹೊಂದಿಕೊಳ್ಳಿ, ಕಿರಿಕಿರಿ ಮಾಡುವವರಿಂದ ದೂರವಿರಿ. ಯಾವುದೇ ಉದ್ಯೋಗವಾಗಲಿ, ಅದು ನಾವು ಸಮಾಜಕ್ಕೆ ಮಾಡುವ ಸೇವೆ ಎಂದು ಭಾವಿಸಿ.
ವಾಸ್ತವಿಕ ಪ್ರಜ್ಞೆ ಇರಲಿ : ನಿಮ್ಮ ಬಲಾಬಲಗಳ ಅರಿವಿರಲಿ. ಕಲ್ಪನಾ ಲೋಕದಲ್ಲಿಯೇ ವಿಹರಿಸಬೇಡಿ. ಸ್ವಾಭಿಮಾನ-ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ, ಯಾವುದೇ ನೆಪ ಅಥವಾ ಕಾರಣವನ್ನು ಒಡ್ಡಿ ಕೀಳರಿಮೆ ಬೇಡ.
ಆದಷ್ಟೂ ಸ್ವಾವಲಂಬಿಯಾಗಿರಿ, ಪರಾವಲಂಬನೆ ಸ್ವಾಭಿಮಾನವನ್ನು ತಗ್ಗಿಸುತ್ತದೆ.

ನಿತ್ಯಜೀವನದಲ್ಲಿ ಶಿಸ್ತು-ಅಚ್ಚುಕಟ್ಟುತನವನ್ನು ರೂಢಿಸಿಕೊಳ್ಳಿ : ಪ್ರತಿಯೊಂದು ಕೆಲಸ, ಚಟುವಟಿಕೆಯನ್ನು ಯೋಜನೆ ಮಾಡಿಕೊಂಡು ಮಾಡಿ. ಪ್ರತಿ ವಸ್ತುವನ್ನು ಆಯಾ ಸ್ಥಳದಲ್ಲಿಡಿ, ಎಲ್ಲೆಂದರೆ ಅಲ್ಲಿ ಎಸೆಯಬೇಡಿ.
ಓರಣ ಮತ್ತು ಸ್ವಚ್ಛತೆ ಮನಸ್ಸಿಗೆ ಮುದ ಕೊಡುತ್ತದೆ ಹಾಗೂ ಸಮಯದ ಸದ್ಬಳಕೆಯಾಗುತ್ತದೆ.
ನಿತ್ಯ ಆರೋಗ್ಯಕರ ಹವ್ಯಾಸ-ಮನರಂಜನೆ ಇರಲಿ : ಒಂದು ಗಂಟೆ ಮೀಸಲಿಡಿ. ಸಾಹಿತ್ಯ ಲಲಿತ ಕಲೆಗಳು, ಸೃಜನಶೀಲ ಚಟುವಟಿಕೆಗಳು ಮನಸ್ಸಿಗೆ ಸಂತೋಷವನ್ನು ಕೊಡುತ್ತವೆ.
ನಿತ್ಯ ವ್ಯಾಯಾಮ-ವಾಕಿಂಗ್-ಜಾಗಿಂಗ್-ಹೊರಾಂಗಣ ಕ್ರೀಡೆ, ಸೈಕ್ಲಿಂಗ್, ಈಜು ಇತ್ಯಾದಿ ಶರೀರಕ್ಕೆ ಚಲನೆ ನೀಡುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.
ಇದನ್ನೂ ಓದಿ : https://vijayatimes.com/virat-respects-ms-dhoni/
ನಕಾರಾತ್ಮಕ ಘಟನೆಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಿ : ಸೋಲು, ಕಷ್ಟ, ನಷ್ಟಗಳು, ಅಗಲಿಕೆ, ಸಾವು, ಅವಮಾನ, ಅಪಘಾತ, ಕೊರತೆ, ಅನಾರೋಗ್ಯಗಳುಂಟಾದಾಗ ಭಯಬೇಡ, ದುಃಖವೂ ಬೇಡ.
ಬಂದು ಹೋಗುವ ಈ ಘಟನೆ ಅನುಭವಗಳಿಂದ ಪಾಠ ಕಲಿಯಿರಿ. ಚಿಂತೆ ಬೇಡ. ಜನಬಲ ಮತ್ತು ಆತ್ಮಬಲವನ್ನು ಹೆಚ್ಚಿಸಿಕೊಳ್ಳಿ.
ಹಣಕಾಸಿನ ನಿರ್ವಹಣೆ : ಅನಗತ್ಯ ಖರ್ಚುಗಳನ್ನು ಮಾಡಬೇಡಿ. ಆದಾಯ ಖರ್ಚನ್ನು ಬ್ಯಾಲೆನ್ಸ್ ಮಾಡಿ. ಅನಿವಾರ್ಯವಾದಾಗ ಮಾತ್ರ ಸಾಲ ಮಾಡಿ ಅದನ್ನು ತೀರಿಸುವ ವಿಧಾನದ ಬಗ್ಗೆಯೂ ಯೋಚಿಸಿ.

ಅನಿವಾರ್ಯವಾದಾಗ ಮಾತ್ರ ಸ್ಪರ್ಧೆ ಮಾಡಿ : ಅನಗತ್ಯ ಸ್ಪರ್ಧೆ ಬೇಡ, ಯಾವಾಗಲೂ ಎಲ್ಲರಿಗಿಂತ ಮೇಲು ಹಾಗೂ ಎಲ್ಲರಿಗಿಂತ ಮುಂದಿರುವ ಅಗತ್ಯವಿಲ್ಲ.
ದೇವರು-ಧರ್ಮದಲ್ಲಿ ನಂಬಿಕೆ ಇದ್ದರೆ, ನಿಮ್ಮ ಧಾರ್ಮಿಕ ಆಚರಣೆಗಳು ಸರಳವಾಗಿರಲಿ ಸತ್ಯ ಪ್ರಾಮಾಣಿಕತೆ ಹಾಗೂ ಸಮಾಜ ಸೇವೆಯಲ್ಲಿಯೇ ದೇವರನ್ನು ಕಾಣಲು ಪ್ರಯತ್ನಿಸಿ.
- ಪವಿತ್ರ