ಬೆಂಗಳೂರಲ್ಲಿ ಖಾಲಿ ಸೈಟ್‌ಗಳ ವಿರುದ್ಧ (Site Cleaning Drive) ಪಾಲಿಕೆ ಸಮರ; 709 ನಿವೇಶನ ಸ್ವಚ್ಛ
ಎರಡು ತಿಂಗಳ ಕಾರ್ಯಾಚರಣೆಯಲ್ಲಿ 1,242 ನಿವೇಶನ ಗುರುತು; 372 ಮಾಲೀಕರಿಗೆ ನೋಟಿಸ್
ಮಾಲೀಕರ ನಿರ್ಲಕ್ಷ್ಯಕ್ಕೆ ಕಡಿವಾಣ; ನಿವೇಶನಗಳಿಗೆ ಬೇಲಿ ಹಾಕಿ ಸ್ವಚ್ಛವಾಗಿಡುವಂತೆ ಸೂಚನೆ
Bengaluru : ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ಮತ್ತು ಪರಿಸರ (Site Cleaning Drive) ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ‘ತ್ಯಾಜ್ಯ ಮುಕ್ತ’ ಅಭಿಯಾನದಡಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಮಹತ್ವದ ಸ್ವಚ್ಛತಾ ಕಾರ್ಯಾಚರಣೆ ಕೈಗೊಂಡಿದೆ.
ವಸತಿ ಪ್ರದೇಶಗಳಲ್ಲಿರುವ ಖಾಲಿ ನಿವೇಶನಗಳು ಕ್ರಮೇಣ ಕಸದ ತಾಣಗಳಾಗಿ ಮಾರ್ಪಡುವುದನ್ನು ತಡೆಯುವ ಉದ್ದೇಶದಿಂದ ಕಳೆದ ಎರಡು ತಿಂಗಳಿನಿಂದ ವಿಶೇಷ
ಅಭಿಯಾನ ನಡೆಸಲಾಗುತ್ತಿದೆ. ಈ ಅವಧಿಯಲ್ಲಿ ಗುರುತಿಸಲಾಗಿದ್ದ ಒಟ್ಟು 1,242 ಖಾಲಿ ನಿವೇಶನಗಳ ಪೈಕಿ 709 ನಿವೇಶನಗಳನ್ನು ಈಗಾಗಲೇ ಸ್ವಚ್ಛಗೊಳಿಸಲಾಗಿದೆ.

ಖಾಲಿ ಜಾಗಗಳಲ್ಲಿ ಕಸ, ತ್ಯಾಜ್ಯ ಹಾಗೂ ಇತರ ವಸ್ತುಗಳು ಸಂಗ್ರಹವಾಗುವುದರಿಂದ (Site Cleaning Drive) ಸುತ್ತಮುತ್ತಲಿನ ನಿವಾಸಿಗಳಿಗೆ ಅನಾರೋಗ್ಯದ ಅಪಾಯ ಎದುರಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪಾಲಿಕೆ ಈ ಕ್ರಮಕ್ಕೆ ಮುಂದಾಗಿದೆ.
ಖಾಲಿ ನಿವೇಶನಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದಿದ್ದರೆ ಅವು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಸ್ಥಳಗಳಾಗಿ ಬದಲಾಗುವ ಸಾಧ್ಯತೆ ಇದೆ. ಅದರಲ್ಲೂ
ಮಳೆ ನೀರು ನಿಂತುಕೊಳ್ಳುವಂತಹ ಜಾಗಗಳಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ, ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕವಿದೆ.
ಈ ಹಿನ್ನೆಲೆಯಲ್ಲಿ ಖಾಲಿ ನಿವೇಶನಗಳು ಕಸದ ತಾಣಗಳಾಗದಂತೆ ಹಾಗೂ ಸೊಳ್ಳೆಗಳ ಉತ್ಪತ್ತಿ ಕೇಂದ್ರಗಳಾಗಿ ಪರಿವರ್ತನೆಯಾಗದಂತೆ ನೋಡಿಕೊಳ್ಳುವುದು ಪಾಲಿಕೆಯ ಪ್ರಮುಖ ಆದ್ಯತೆಯಾಗಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ತಮ್ಮ ಒಡೆತನದ ನಿವೇಶನಗಳನ್ನು ನಿಯಮಿತವಾಗಿ ಸ್ವಚ್ಛವಾಗಿಟ್ಟುಕೊಳ್ಳುವುದು ಮಾಲೀಕರ ಜವಾಬ್ದಾರಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದು, ಈ ಕುರಿತು ನಿವೇಶನ
ಮಾಲೀಕರಿಗೆ ಸೂಚನೆ ನೀಡಲಾಗಿದೆ. ಪಾಲಿಕೆಯ ಸ್ವಚ್ಛತಾ ಕಾರ್ಯಾಚರಣೆಯ ಜೊತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಲಿ ನಿವೇಶನಗಳ ಸ್ವಚ್ಛತೆ ಕಾಪಾಡುವಲ್ಲಿ ನಿರ್ಲಕ್ಷ್ಯ ತೋರುವ ಮಾಲೀಕರ ವಿರುದ್ಧವೂ ಪಾಲಿಕೆ ಕ್ರಮ ಕೈಗೊಳ್ಳುತ್ತಿದೆ. ಒಟ್ಟು 533 ಖಾಲಿ ನಿವೇಶನಗಳ ಮಾಲೀಕರ ವಿರುದ್ಧ
ಕಠಿಣ ಕ್ರಮ ಆರಂಭಿಸಲಾಗಿದ್ದು, ಈವರೆಗೆ 372 ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ತಮ್ಮ ನಿವೇಶನಗಳಲ್ಲಿ ಕಸ ಮತ್ತು ತ್ಯಾಜ್ಯ ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎಂದು ಮಾಲೀಕರಿಗೆ ಸೂಚಿಸಲಾಗಿದೆ. ಅಲ್ಲದೆ, ಹೊರಗಿನವರು ನಿವೇಶನಕ್ಕೆ
ಕಸ ಎಸೆಯುವುದನ್ನು ತಡೆಯಲು ಸೂಕ್ತವಾದ ತಂತಿ ಬೇಲಿ ಅಥವಾ ಇತರ ಅಗತ್ಯ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
ನಿವೇಶನವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಮಾಲೀಕರಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ನಿವಾಸಿಗಳಿಗೂ ಅನುಕೂಲವಾಗಲಿದೆ. ಸಾರ್ವಜನಿಕರು ಕೂಡ ಎಲ್ಲೆಂದರಲ್ಲಿ ಕಸ ಎಸೆಯದೆ ನಗರದ ಸ್ವಚ್ಛತಾ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಪಾಲಿಕೆ ಮನವಿ ಮಾಡಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವಿವಿಧ ವಿಭಾಗಗಳಲ್ಲಿ ನಡೆದಿರುವ ಕಾರ್ಯಾಚರಣೆಯಲ್ಲೂ ಗಮನಾರ್ಹ ಪ್ರಗತಿ ಕಂಡುಬಂದಿದೆ. ದಕ್ಷಿಣ ವಿಭಾಗದಲ್ಲಿ ಗುರುತಿಸಲಾದ
518 ನಿವೇಶನಗಳ ಪೈಕಿ ಮಾಲೀಕರೇ 305 ನಿವೇಶನಗಳನ್ನು ಸ್ವಚ್ಛಗೊಳಿಸಿದ್ದು, ಪಾಲಿಕೆಯ ಸಿಬ್ಬಂದಿ 13 ನಿವೇಶನಗಳನ್ನು ಸ್ವಚ್ಛಗೊಳಿಸಿದ್ದಾರೆ.
ಇನ್ನೂ 200 ನಿವೇಶನಗಳನ್ನು ಸ್ವಚ್ಛಗೊಳಿಸುವಂತೆ ಮಾಲೀಕರಿಗೆ ಸೂಚಿಸಲಾಗಿದೆ. ಈ ವಿಭಾಗದಲ್ಲಿ 93 ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ಬೊಮ್ಮನಹಳ್ಳಿ ವಿಭಾಗದಲ್ಲಿ ಗುರುತಿಸಲಾದ 498 ನಿವೇಶನಗಳ ಪೈಕಿ ಮಾಲೀಕರು 276 ನಿವೇಶನಗಳನ್ನು ಹಾಗೂ ಪಾಲಿಕೆ ಒಂದು ನಿವೇಶನವನ್ನು ಸ್ವಚ್ಛಗೊಳಿಸಿದೆ.
ಉಳಿದ ನಿವೇಶನಗಳ ಸ್ವಚ್ಛತೆಗಾಗಿ ಕ್ರಮ ಕೈಗೊಳ್ಳಲಾಗುತ್ತಿದ್ದು, 140 ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಬಿಟಿಎಂ ವಿಭಾಗದಲ್ಲಿ 111 ನಿವೇಶನಗಳ ಪೈಕಿ ಮಾಲೀಕರು
23 ಮತ್ತು ಪಾಲಿಕೆ ಐದು ನಿವೇಶನಗಳನ್ನು ಸ್ವಚ್ಛಗೊಳಿಸಿದ್ದು, ಬಾಕಿ ಇರುವ ನಿವೇಶನಗಳ ಪೈಕಿ 62 ಮಾಲೀಕರಿಗೆ ನೋಟಿಸ್ ಜಾರಿಯಾಗಿದೆ.
ಪದ್ಮನಾಭನಗರ ಹಾಗೂ ಜಯನಗರ ವಿಭಾಗಗಳಲ್ಲಿಯೂ ಪಾಲಿಕೆ ಸ್ವಚ್ಛತಾ ಕಾರ್ಯವನ್ನು ಮುಂದುವರಿಸಿದೆ. ಪದ್ಮನಾಭನಗರದಲ್ಲಿ ಗುರುತಿಸಲಾದ 62 ಖಾಲಿ ನಿವೇಶನಗಳ
ಪೈಕಿ ಮಾಲೀಕರು 38 ಹಾಗೂ ಪಾಲಿಕೆ 18 ನಿವೇಶನಗಳನ್ನು ಸ್ವಚ್ಛಗೊಳಿಸಿದ್ದು, ಇನ್ನೂ ಆರು ನಿವೇಶನಗಳ ಸ್ವಚ್ಛತೆ ಬಾಕಿಯಿದೆ.
ಈ ವಿಭಾಗದಲ್ಲಿ 35 ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಜಯನಗರದಲ್ಲಿ ಒಟ್ಟು 53 ನಿವೇಶನಗಳ ಪೈಕಿ ಮಾಲೀಕರು 26 ಹಾಗೂ ಪಾಲಿಕೆ ನಾಲ್ಕು ನಿವೇಶನಗಳನ್ನು ಸ್ವಚ್ಛಗೊಳಿಸಿದೆ. ಉಳಿದ 23 ನಿವೇಶನಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ವಿಭಾಗದಲ್ಲಿ 42 ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ನಗರದಲ್ಲಿ ಖಾಲಿ ನಿವೇಶನಗಳ ನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವ ಉದ್ದೇಶದಿಂದ ಪಾಲಿಕೆ ತನ್ನ ಕಾರ್ಯಾಚರಣೆಯನ್ನು ಮುಂದುವರಿಸುವ ಸಾಧ್ಯತೆಯಿದೆ.
ಖಾಲಿ ಜಾಗಗಳಲ್ಲಿ ಕಸ ಸಂಗ್ರಹವಾಗದಂತೆ ಮಾಲೀಕರು ಜವಾಬ್ದಾರಿ ವಹಿಸುವುದರ ಜೊತೆಗೆ ಸಾರ್ವಜನಿಕರೂ ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಪಾಲಿಸಿದರೆ ಬೆಂಗಳೂರಿನ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಹೆಚ್ಚಿನ ನೆರವು ದೊರೆಯಲಿದೆ.
ಇದನ್ನು ಓದಿ : https://vijayatimes.com/ai-voices-for-voiceless/