- ಚಿನ್ನವೆಂದರೆ ಕೇವಲ ಆಭರಣವಲ್ಲ (smart investment on gold) ಉತ್ತಮ ಹೂಡಿಕೆ
- ಡಿಜಿಟಲ್ನಲ್ಲಿ ಚಿನ್ನದ ಹೂಡಿಕೆ ಬಲು ಸುಲಭ
- ಮನೆಗೆ ಚಿನ್ನ ತರದೇ, ಭದ್ರತಾ ಭಯವಿಲ್ಲದೇ, ಸ್ಮಾರ್ಟ್ ಆಗಿ ಬಂಗಾರದಲ್ಲಿ ಹೂಡಿಕೆ ಮಾಡಬಹುದು
ಮೊದಲೆಲ್ಲ ಚಿನ್ನವೆಂದರೆ ಕೇವಲ ಆಭರಣ (smart investment on gold) ಎನ್ನುವ ಭಾವನೆಯಿತ್ತು.
ಆದ್ರೆ ಇಂದಿನ ದಿನಗಳಲ್ಲಿ ಚಿನ್ನವು ಕೇವಲ ಆಭರಣವಲ್ಲ, ಅದು ಭದ್ರ ಹೂಡಿಕೆಯ ಸಂಕೇತವೂ ಹೌದು.
ಆದರೆ ಫಿಸಿಕಲ್ (Physical) ಚಿನ್ನವನ್ನು ಖರೀದಿಸಿದ ತಕ್ಷಣವೇ ಹಲವು ತೊಂದರೆಗಳು ಆರಂಭವಾಗುತ್ತವೆ. ಚಿನ್ನವನ್ನು ಸುರಕ್ಷಿತವಾಗಿ ಇಡುವ ಲಾಕರ್ ಸಮಸ್ಯೆ, ಕಳ್ಳತನದ ಭಯ, ವಿಮೆ, ಸಾಗಣೆ ಈ ಎಲ್ಲಾ ಚಿಂತೆಗಳು ಹೂಡಿಕೆದಾರರನ್ನು ಕಾಡುತ್ತವೆ.

ಇದೇ ಕಾರಣಕ್ಕೆ ಇತ್ತೀಚಿನ ವರ್ಷಗಳಲ್ಲಿ ಚಿನ್ನದ ಹೂಡಿಕೆಯಲ್ಲಿ ಒಂದು ದೊಡ್ಡ ಬದಲಾವಣೆ ಕಂಡುಬರುತ್ತಿದೆ. ಮನೆಗೆ ಚಿನ್ನ ತರುವ ಬದಲು, ಡಿಜಿಟಲ್ ರೂಪದಲ್ಲಿ ಚಿನ್ನದಲ್ಲಿ ಹೂಡಿಕೆ ಮಾಡುವ ಟ್ರೆಂಡ್ ವೇಗವಾಗಿ ಜನಪ್ರಿಯವಾಗುತ್ತಿದೆ.
ತಂತ್ರಜ್ಞಾನ ಬೆಳೆದಂತೆ, ಹಣಕಾಸು ಕ್ಷೇತ್ರದಲ್ಲೂ ಹೊಸ ಆಯ್ಕೆಗಳು ಹುಟ್ಟಿಕೊಳ್ಳುತ್ತಿದ್ದು, ಡಿಜಿಟಲ್ ಗೋಲ್ಡ್ ಇನ್ವೆಸ್ಟ್‌ಮೆಂಟ್ (Investment) ಇಂದು ಸ್ಮಾರ್ಟ್ ಹೂಡಿಕೆದಾರರ ಮೊದಲ ಆಯ್ಕೆಯಾಗಿದೆ.
ಭದ್ರತೆ, ಪಾರದರ್ಶಕತೆ ಮತ್ತು ಸುಲಭ ವ್ಯವಹಾರ ಎಲ್ಲವೂ ಒಂದೇ ಜಾಗದಲ್ಲಿ ದೊರೆಯುವುದು ಡಿಜಿಟಲ್ ಗೋಲ್ಡ್‌ನ (Digital Gold) ದೊಡ್ಡ ಶಕ್ತಿಯಾಗಿದೆ.
ಡಿಜಿಟಲ್ ಗೋಲ್ಡ್ (Digital Gold) ಎಂದರೆ ನೇರವಾಗಿ ಚಿನ್ನವನ್ನು ಕೊಲ್ಲುವುದಲ್ಲ . ಆಭರಣವಂತೂ ಅಲ್ಲವೇ ಅಲ್ಲ.ಬದಲಾಗಿ ಆನ್‌ಲೈನ್ (Online) ಅಥವಾ ಕಾಗದದ ರೂಪದಲ್ಲಿ ಚಿನ್ನದ ಮೌಲ್ಯದ ಮೇಲೆ ಹೂಡಿಕೆ ಮಾಡುವುದು.
ಇಲ್ಲಿ ಫಿಸಿಕಲ್ ಗೋಲ್ಡ್‌ನಂತೆ ತೂಕ, ಶುದ್ಧತೆ ಅಥವಾ ಸಂಗ್ರಹಣೆಯ ತಲೆನೋವು ಇರುವುದಿಲ್ಲ. ಹೂಡಿಕೆದಾರರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೇ ಚಿನ್ನ ಖರೀದಿ–ಮಾರಾಟ ಮಾಡಬಹುದು.
ಅಗತ್ಯ ಬಂದಾಗ ತಕ್ಷಣವೇ ಹಣಕ್ಕೆ ಪರಿವರ್ತಿಸಬಹುದಾದ ಲಿಕ್ವಿಡಿಟಿ (Liquidity) ಇದಕ್ಕಿರುವ ದೊಡ್ಡ ಲಾಭ.
ಡಿಜಿಟಲ್ ಗೋಲ್ಡ್‌ನಲ್ಲಿ (Digital Gold) ಮುಖ್ಯವಾಗಿ ಎರಡು ಜನಪ್ರಿಯ ಮಾರ್ಗಗಳಿವೆ—ಗೋಲ್ಡ್ ETF ಮತ್ತು ಗೋಲ್ಡ್ ಮ್ಯೂಚುವಲ್ ಫಂಡ್.
ಇವು ಎರಡೂ ಚಿನ್ನದ ಬೆಲೆ ಚಲನವಲನದ ಆಧಾರದ ಮೇಲೆ ಲಾಭ–ನಷ್ಟ ನೀಡುತ್ತವೆ. ಆದರೆ ಕಾರ್ಯಪದ್ಧತಿ, ಖರ್ಚು ಮತ್ತು ಹೂಡಿಕೆದಾರರ ಅಗತ್ಯದ ದೃಷ್ಟಿಯಿಂದ ಎರಡಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ.
ಗೋಲ್ಡ್ ETF (Exchange Traded Fund) ಅಂದರೆ ನೇರವಾಗಿ ಫಿಸಿಕಲ್ ಗೋಲ್ಡ್ ಬೆಂಬಲಿತ ಫಂಡ್.
ಇಲ್ಲಿ ಪ್ರತಿ ಯುನಿಟ್ ಸಾಮಾನ್ಯವಾಗಿ 1 ಗ್ರಾಂ ಶುದ್ಧ ಚಿನ್ನಕ್ಕೆ ಸಮಾನವಾಗಿರುತ್ತದೆ.
ಶೇರು ಮಾರುಕಟ್ಟೆಯಲ್ಲಿ ಶೇರುಗಳನ್ನು ಖರೀದಿಸುವಂತೆ, ಗೋಲ್ಡ್ ETFಗಳನ್ನು ಕೂಡ ಸ್ಟಾಕ್ ಎಕ್ಸ್‌ಚೇಂಜ್ ಮೂಲಕ ಖರೀದಿ ಮತ್ತು ಮಾರಾಟ ಮಾಡಬಹುದು. ಇದಕ್ಕಾಗಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಅಗತ್ಯವಾಗಿರುತ್ತದೆ.
ಲಿಕ್ವಿಡಿಟಿ ಹೆಚ್ಚಿರುವುದರಿಂದ ಮಾರುಕಟ್ಟೆ ಸಮಯದಲ್ಲಿ ತಕ್ಷಣ ವ್ಯವಹಾರ ಸಾಧ್ಯ.
ಗೋಲ್ಡ್ ETFಗಳ ಮ್ಯಾನೇಜ್‌ಮೆಂಟ್ ಚಾರ್ಜ್ ಸಾಮಾನ್ಯವಾಗಿ ಕಡಿಮೆ ಇರುತ್ತದೆ, ಇದರಿಂದ ದೀರ್ಘಾವಧಿಯಲ್ಲಿ ವೆಚ್ಚದ ಒತ್ತಡ ಕಡಿಮೆಯಾಗುತ್ತದೆ.
ಆದರೆ ಡಿಮ್ಯಾಟ್ ಶುಲ್ಕ, ಬ್ರೋಕರೆಜ್ (Brokerage) ಮತ್ತು ಇತರ ಟ್ರೇಡಿಂಗ್ ಸಂಬಂಧಿತ ಖರ್ಚುಗಳನ್ನು ಹೂಡಿಕೆದಾರರು ಗಮನದಲ್ಲಿಟ್ಟುಕೊಳ್ಳಬೇಕು.
ಇನ್ನೊಂದೆಡೆ ಗೋಲ್ಡ್ ಮ್ಯೂಚುವಲ್ ಫಂಡ್ (Mutual Fund) ನೇರವಾಗಿ ಚಿನ್ನವನ್ನು ಖರೀದಿಸುವುದಿಲ್ಲ. ಇದು ಗೋಲ್ಡ್ ETFಗಳಲ್ಲಿ ಹೂಡಿಕೆ ಮಾಡುವ ‘ಫಂಡ್ ಆಫ್ ಫಂಡ್ಸ್’ ಆಗಿರುತ್ತದೆ.
ಇದರ ದೊಡ್ಡ ಲಾಭ ಅಂದರೆ ಡಿಮ್ಯಾಟ್ ಅಕೌಂಟ್ ಅಗತ್ಯವಿಲ್ಲ. ಸಾಮಾನ್ಯ ಮ್ಯೂಚುವಲ್ ಫಂಡ್‌ಗಳಂತೆ, ಲಂಪ್‌ಸಂ ಅಥವಾ SIP ಮೂಲಕ ಹೂಡಿಕೆ ಮಾಡಬಹುದು.
ಕೇವಲ ₹500ರಿಂದಲೇ SIP ಆರಂಭಿಸುವ ಅವಕಾಶ ಇರುವುದರಿಂದ, ಕಡಿಮೆ ಆದಾಯದವರಿಗೂ ಚಿನ್ನದ ಹೂಡಿಕೆ ಸಾಧ್ಯವಾಗುತ್ತದೆ.
ಪ್ರತಿ ಫಂಡ್‌ಗೆ ಫಂಡ್ ಮ್ಯಾನೇಜರ್ ಇದ್ದು, ಹೂಡಿಕೆ ಸಂಬಂಧಿತ ನಿರ್ಧಾರಗಳನ್ನು ವೃತ್ತಿಪರವಾಗಿ ನಿರ್ವಹಿಸುತ್ತಾರೆ. ಆದರೆ ಗೋಲ್ಡ್ ETFಗಿಂತ ಸ್ವಲ್ಪ ಹೆಚ್ಚಾದ ಎಕ್ಸ್‌ಪೆನ್ಸ್ ರೇಷಿಯೋ ಇರಬಹುದು.
ಕೆಲವು ಫಂಡ್‌ಗಳಲ್ಲಿ ಎಕ್ಸಿಟ್ ಲೋಡ್ ಇರುವ ಸಾಧ್ಯತೆಯೂ ಇರುತ್ತದೆ, ಇದನ್ನು ಹೂಡಿಕೆ ಮಾಡುವ ಮುನ್ನ ಪರಿಶೀಲಿಸುವುದು ಮುಖ್ಯ.
ಹಾಗಾದರೆ ಯಾವುದು ಉತ್ತಮ ಎಂಬ ಪ್ರಶ್ನೆಗೆ ಉತ್ತರ ಹೂಡಿಕೆದಾರರ ಅಗತ್ಯದ ಮೇಲೆ ಅವಲಂಬಿತವಾಗಿದೆ.
ನಿಯಮಿತವಾಗಿ, ಕಡಿಮೆ ಮೊತ್ತದಲ್ಲಿ ಚಿನ್ನದಲ್ಲಿ ಹೂಡಿಕೆ ಮಾಡುವ ಉದ್ದೇಶವಿದ್ದರೆ ಗೋಲ್ಡ್ ಮ್ಯೂಚುವಲ್ ಫಂಡ್ ಉತ್ತಮ ಆಯ್ಕೆ. ಡಿಮ್ಯಾಟ್ ಇಲ್ಲದೇ ಸುಲಭವಾಗಿ ಹೂಡಿಕೆ ಮಾಡಲು ಇದು ಅನುಕೂಲ.
ಆದರೆ ಡಿಮ್ಯಾಟ್ ಅಕೌಂಟ್ ಹೊಂದಿದ್ದು, ನೇರವಾಗಿ ಮಾರುಕಟ್ಟೆಯಲ್ಲಿ ವ್ಯವಹರಿಸಲು ಬಯಸುವವರಿಗೆ ಗೋಲ್ಡ್ ETF ಹೆಚ್ಚು ಸೂಕ್ತ.
ತೆರಿಗೆ ದೃಷ್ಟಿಯಿಂದ ನೋಡಿದರೆ, ಎರಡಕ್ಕೂ ಶಾರ್ಟ್ ಟರ್ಮ್ (Short term) ಮತ್ತು ಲಾಂಗ್ ಟರ್ಮ್ (Long Term) ಕ್ಯಾಪಿಟಲ್ ಗೇನ್ಸ್ ತೆರಿಗೆ ಅನ್ವಯಿಸುತ್ತದೆ.
ಒಟ್ಟಿನಲ್ಲಿ, ಮನೆಗೆ ಚಿನ್ನ ತರದೇ, ಲಾಕರ್ ಅಥವಾ ಕಳ್ಳತನದ ಭಯವಿಲ್ಲದೇ, ಪಾರದರ್ಶಕ ಹಾಗೂ ಸುರಕ್ಷಿತ ರೀತಿಯಲ್ಲಿ ಚಿನ್ನದಲ್ಲಿ ಹೂಡಿಕೆ ಮಾಡಲು ಡಿಜಿಟಲ್ ಗೋಲ್ಡ್ ಇಂದಿನ ಕಾಲದ ಬುದ್ಧಿವಂತ ಮತ್ತು ಸ್ಮಾರ್ಟ್ ಆಯ್ಕೆಯಾಗಿದೆ.
ಇದನ್ನು ಓದಿ : ಲಿಯೋನಲ್ ಮೆಸ್ಸಿ GOAT ಇಂಡಿಯಾ ಟೂರ್ 2025:ದೆಹಲಿಯಲ್ಲಿ ಭಾರತದ ಕ್ರೀಡಾ ಹೀರೋಗಳೊಂದಿಗೆ ಮೆಸ್ಸಿ ವೇದಿಕೆ ಹಂಚಿಕೆ