ಚಿತ್ರ-ವಿಚಿತ್ರವಾದ ಅಡುಗೆ, ಆಹಾರಕ್ಕೆ ಹೆಸರುವಾಸಿ ಚೀನಾ(China). ಚೀನಾದವರು ನಾಯಿಯಿಂದ ಹಿಡಿದು ಹಾವು, ಚೇಳುಗಳನ್ನೂ ಬಿಡುವವರಲ್ಲ ಎಂಬುದು ಎಲ್ಲರಿಗೂ ಗೊತ್ತು.

ಆದರೆ, ಮಸಾಲೆಗೆ, ರುಚಿಗೆ, ಸಸ್ಯಹಾರಕ್ಕೆ, ವೈವಿಧ್ಯತೆಗೆ ಹೆಸರಾದ ಭಾರತದಲ್ಲಿ ಕೂಡಾ ಒಂದಿಷ್ಟು ವಿಭಿನ್ನವಾದ, ಊಹಿಸಲು ಅಸಾಧ್ಯವಾದ ತಿಂಡಿ ತಿನಿಸುಗಳಿವೆ. ಕೆಲ ಭಾಗಗಳಲ್ಲಿ ಅವು ಸರ್ವೇ ಸಾಮಾನ್ಯವಾಗಿಯೂ ಇವೆ ಎಂದರೆ ಆಶ್ಚರ್ಯವೇ ಸರಿ. ಹೌದು, ಈ ಕೆಲ ತಿಂಡಿಗಳು ಭಾರತದಲ್ಲಿ ಮಾತ್ರ ಕಾಣಸಿಗಲು ಸಾಧ್ಯ. ಕುಚ್ಚಿಗೆ ಅಕ್ಕಿ ಅಥವಾ ಕೆಂಪು ಬಣ್ಣದ ಅಕ್ಕಿ ದಕ್ಷಿಣ ಭಾರತದಲ್ಲಿ ಹೇಗೆ ಜನಪ್ರಿಯವಾಗಿದೆಯೋ, ಹಾಗೆಯೇ ಮಣಿಪುರ, ಕೇರಳ ಹಾಗೂ ಉತ್ತರ ಬಂಗಾಳದಲ್ಲಿ ಕಪ್ಪು ಬಣ್ಣದ ಅಕ್ಕಿಯನ್ನು ಬಳಸಲಾಗುತ್ತದೆ.
ಇದು ಬಹಳ ಪೋಷಕಸತ್ವಗಳನ್ನು ಹೊಂದಿದ್ದು, “ಮ್ಯಾಜಿಕ್ ರೈಸ್”(Magic Rice) ಎಂಬ ಹೆಸರು ಪಡೆದಿದೆ. ಕೆಂಪಿರುವೆ ಚಟ್ನಿ, ಮರಗಳ ಮೇಲೆ ಕೆಂಪಿರುವೆಗಳು ಸಾಲಿನಲ್ಲಿ ಸಾಗುವುದನ್ನು ನೋಡಿದ್ರೇನೇ ಮೈ ಝುಂ ಎನ್ನುತ್ತದೆ. ಆದರೆ, ಇಂಥ ಈ ಇರುವೆಗಳನ್ನು ನೋಡಿದರೆ ಬಾಯಲ್ಲಿ ನೀರೂರುತ್ತದೆ ಚತ್ತೀಸ್‌ಗಢದ(Chattisgadh) ಸ್ಥಳೀಯ ಬುಡಕಟ್ಟಿನವರಿಗೆ! ಹೌದು, ಅವರು ಈ ಕೆಂಜಗದ ಗೂಡಿನಿಂದ ಸಾವಿರಾರು ಕೆಂಪಿರುವೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಕಲ್ಲಿನಲ್ಲಿ ಅರೆದು “ಛಪ್ರಾ” ಎಂಬ ಚಟ್ನಿ ತಯಾರಿಸುತ್ತಾರೆ. ಹುಳಿಹುಳಿಯಾಗಿರುವ ಈ ಚಟ್ನಿ ಅನ್ನದ ಜೊತೆ ಬಹಳ ರುಚಿಯಂತೆ!

ಎರಿ ಪೋಲು ಸಿಲ್ಕ್‌ವಾರ್ಮ್ : ಅಸ್ಸಾಂನ(Assam) ಜನರಿಗೆ ರೇಶ್ಮೆ ಹುಳುಗಳನ್ನು ಕಂಡರೆ ಸಾಕು, ಬಾಯಲ್ಲಿ ನೀರು ಬರುತ್ತದೆಯಂತೆ. ಈ ರೇಶ್ಮೆ ಹುಳುಗಳಿಂದ ತಯಾರಿಸುವ “ಎರಿ ಪೋಲು” ಎಂಬ ಆಹಾರ ಅಸ್ಸಾಂ ರಾಜ್ಯದ ಹೆಮ್ಮೆಯ ಆಹಾರವಾಗಿದ್ದು, ಇದು ಬಾಯಲ್ಲಿಟ್ಟರೆ ಕರಗುತ್ತದಂತೆ.
ಫ್ರೈಡ್ ಸ್ನೇಲ್ಸ್ : ಬಸವನಹುಳು(Snail) ನೋಡಿದರೆ ಹೆಚ್ಚಿನವರಿಗೆ ಅಸಹ್ಯ ಎನಿಸುತ್ತದೆ. ಅದರ ಸಿಂಬಳದಂತಹ ಲೋಳೆ ಮೈ, ಒದ್ದೆ ಮುದ್ದೆಯಾಗಿ ವಿಚಿತ್ರ ರೂಪದಿಂದ ಮೈ ಝುಂ ಎನಿಸುತ್ತವೆ ಈ ಹುಳುಗಳು. ಆದರೆ ಒಡಿಶಾದಲ್ಲಿ ಮಾತ್ರ ಇವುಗಳನ್ನು ಸಂಗ್ರಹಿಸಿ ಬಾಣಲೆಗೆ ಹಾಕಿ ಹುರಿದು ಖಾರ ಹಾಕಿ ಫ್ರೈಡ್ ರೈಸ್
ಜೊತೆ ಸೇರಿಸಿ ಕೊಡುತ್ತಾರೆ! ಈರುಳ್ಳಿ ಹಲ್ವಾದ(Onion Halwa) ಬಗ್ಗೆ ಕೇಳಿದ್ದೀರಾ? ಈರುಳ್ಳಿ ಕಣ್ಣಲ್ಲಿ ನೀರು ಬರಿಸೋದೇನೋ ಹೌದು. ಆದ್ರೆ ಇದರಿಂದ ಬಾಯಲ್ಲಿ ನೀರೂರಿಸುವಂಥ ಹಲ್ವಾ ತಯಾರಿಸೋಕೆ ಸಾಧ್ಯಾನಾ? ಕಲ್ಪನೆ ಮಾಡುವುದೂ ಅಸಾಧ್ಯ ಅಲ್ಲವೇ ? ಆದರೆ, ಇಂಥದ್ದೊಂದು ಸಿಹಿತಿಂಡಿ ನಮ್ಮ ದೇಶದಲ್ಲೇ ಸಿಗುತ್ತದೆ.

ಹೌದು, ಕ್ಯಾರೆಟ್ ಹಲ್ವಾ, ಕುಂಬಳಕಾಯಿ ಹಲ್ವಾವನ್ನು ನಾವು ಸವಿಯುವಷ್ಟೇ ಸಲೀಸಾಗಿ ಕೆಲವರು ಈರುಳ್ಳಿ ಹಲ್ವಾವನ್ನು ಸವಿಯುತ್ತಾರೆ. ಈರುಳ್ಳಿಯನ್ನು ಬೆಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿ, ಬಳಿಕ ಸಣ್ಣ ಉರಿಯಲ್ಲಿ ಬೇಯಿಸಿ, ನಂತರ ಹಾಲು ಹಾಗೂ ಸಕ್ಕರೆ ಸೇರಿಸಿ ಪಾಕ ಬರಿಸಲಾಗುತ್ತದೆ. ಹೀಗೆ ಸಿದ್ದವಾಗುವ ಸಿಹಿ ತಿಂಡಿಯೇ ಈರುಳ್ಳಿ ಹಲ್ವಾ.