10 ಕಿಲೋಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ದೂರವನ್ನು ಸಾಮಾನ್ಯವಾಗಿ ಹೆಚ್ಚಿನ ಜನರು ಕಾರುಗಳು ಅಥವಾ ಸಾರ್ವಜನಿಕ ಸಾರಿಗೆಯ ಮೂಲಕ ತಲುಪುತ್ತಾರೆ. ಆದರೆ, ಈ ಯುವಕ 10 ಕಿಲೋಮೀಟರ್ ದೂರವನ್ನು ಓಡುವ ಮೂಲಕ ತಲುಪುತ್ತಾನೆ. ಹೌದು, ದೃಢಸಂಕಲ್ಪದಿಂದ ಮತ್ತು ತಾನು ಬಯಸಿದ್ದನ್ನು ಸಾಧಿಸುವ ಛಲದಿಂದ ಮುನ್ನುಗ್ಗುತ್ತಿರುವ ಈ ಯುವಕನ ಹೆಸರು ಪ್ರದೀಪ್ ಮೆಹ್ರಾ, 19 ವರ್ಷದ ಹುಡುಗನೊಬ್ಬ ಮಧ್ಯರಾತ್ರಿ ನೋಯ್ಡಾ ರಸ್ತೆಯಲ್ಲಿ ಓಡಿಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ವೀಕ್ಷಣೆ ಪಡೆಯುವ ಮೂಲಕ ಭಾರಿ ವೈರಲ್ ಆಗಿದೆ.

ಆದಾಗ್ಯೂ, ಅವರ ಓಟದ ಹಿಂದಿನ ಕಾರಣವೇನು ಎಂಬುದನ್ನು ತಿಳಿಯುವುದಾದರೆ, ಕೇವಲ ವ್ಯಾಯಾಮಕ್ಕಿಂತ ಹೆಚ್ಚಿನ ಉದ್ದೇಶವೇ ಕೇಳಿಬಂದಿದೆ. ಅದೇನು ಅಂತೀರಾ? ಮುಂದೆ ಓದಿ. ಇದು ಭಾರತೀಯ ಸಶಸ್ತ್ರ ಪಡೆಗಳನ್ನು ಸೇರುವ ಗುರಿಯತ್ತ ಧ್ಯೇಯ ಸಾಗಿದೆ. ಈ ವೈರಲ್ ಕ್ಲಿಪ್ ಅನ್ನು ರಾಷ್ಟ್ರ ಪ್ರಶಸ್ತಿ ವಿಜೇತ, ಚಲನಚಿತ್ರ ನಿರ್ಮಾಪಕ ವಿನೋದ್ ಕಪ್ರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಶುದ್ಧ ಚಿನ್ನ ಎಂಬ ಶೀರ್ಷಿಕೆಯೊಂದಿಗೆ, ಭಾನುವಾರ (ಮಾರ್ಚ್ 20) ಸಂಜೆ ಅಪ್‌ಲೋಡ್ ಮಾಡಿದ್ದಾರೆ. ಮಧ್ಯರಾತ್ರಿ ಉತ್ತರಾಖಂಡ್‌ನಿಂದ ಬಂದ ಪ್ರದೀಪ್ ಮೆಹ್ರಾ ಅವರು ನೋಯ್ಡಾ ಸೆಕ್ಟರ್ 16 ರಲ್ಲಿ ಮನೆಗೆ ತಲುಪಲು ಓಡಿ ಹೋಗುತ್ತಿದ್ದಾರೆ.

ಯಾಕೆ ಓಡುತ್ತಿದ್ದೀರಿ, ಬನ್ನಿ ಕಾರಿನಲ್ಲೇ ಡ್ರಾಪ್ ನೀಡ್ತೀನಿ ಎಂದಾಗ ಬೇಡ ನಾನು ಕಾರಣದಿಂದಲೇ ಓಡುತ್ತಿದ್ದೀನಿ, ಓಡಿಕೊಂಡು ಮನೆಗೆ ಸೇರುತ್ತೇನೆ. ಓಡಲು ನನಗೆ ಈ ಸಮಯ ಬಿಟ್ಟರೇ ಬೇರೆ ಸಮಯ ದೊರೆಯುವುದಿಲ್ಲ. ನನಗೆ ಭಾರತ ಸೇನೆಗೆ ಸೇರಬೇಕು ಎಂಬ ಗುರಿಯಿದೆ. ಹೀಗಾಗಿ ಅದಕ್ಕೆ ಚೆನ್ನಾಗಿ ತರಬೇತಿ ಬೇಕಾಗಿದೆ. ನಾನು ಓಡುವ ಮೂಲಕ ನನ್ನ ಆರೋಗ್ಯದ ಜೊತೆ ಜೊತೆಗೆ ತರಬೇತಿಗೆ ಈ ತಯಾರಿ ಎಂದು ಹೇಳಿದ್ದಾನೆ. ನೀವು ಎಲ್ಲಿ ಕೆಲಸ ಮಾಡುತ್ತಿದ್ದೀರಿ ಎಂದಾಗ, ಮೆಕ್‌ಡೊನಾಲ್ಡ್ಸ್‌ನಲ್ಲಿ ತನ್ನ ಶಿಫ್ಟ್ ಮುಗಿಸಿ, ನಂತರ ಕೆಲಸದಿಂದ ಮನೆಗೆ ಓಡುತ್ತಿದ್ದೇನೆ ಎಂದು ಹೇಳುತ್ತಾನೆ.
ನನ್ನ ತಾಯಿಯವರ ಆರೋಗ್ಯ ಸರಿಯಿಲ್ಲ, ಅವರು ಅನಾರೋಗ್ಯದ ಸ್ಥಿತಿಯಲ್ಲಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಳ್ಳುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, 5.5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನೆಟಿಜನ್‌ಗಳು ಬಾಲಕನ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪಕ್ಕಾಗಿ ವ್ಯಾಪಕವಾಗಿ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.