ದೆಹಲಿ, ಏ. 12: ಮುಸ್ಲಿಂಮರ ಪವಿತ್ರ ಧಾರ್ಮಿಕ ಗ್ರಂಥ ಕುರಾನ್ನ ಕೆಲವು ಭಾಗಗಳು ದೇಶದ ಕಾನೂನಿಗೆ ವಿರುದ್ಧವಾಗಿವೆ ಮತ್ತು ಭಯೋತ್ಪಾದನೆಗೆ ಪ್ರಚೋದನೆ ನಡೆಸುತ್ತವೆ ಎಂದು ದೂರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸುಪ್ರೀಂಕೋರ್ಟ್ ಇಂದು ತಿರಸ್ಕರಿಸಿದೆ. ಅಲ್ಲದೇ ಪಿಐಎಲ್ ಸಲ್ಲಿಸಿದ್ದ ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸೀಂ ರಿಜ್ವಿಗೆ 50 ಸಾವಿರ ದಂಡವನ್ನು ಸಹ ಸುಪ್ರೀಂಕೋರ್ಟ್ ವಿಧಿಸಿದೆ.
ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಫಾಲಿ ನಾರೀಮನ್, ಬಿ ಆರ್, ಗವೈ ಹೃಷಿಕೇಶ್ ರಾಯ್ ಅವರ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ.
ಉತ್ತರ ಪ್ರದೇಶದ ಕೇಂದ್ರೀಯ ವಕ್ಫ್ ಬೋರ್ಡ್ನ ಮಾಜಿ ಅಧ್ಯಕ್ಷ, ಆಲ್ ಇಂಡಿಯಾ ಶಿಯಾ ಯತೀಮ್ ಖಾನಾದ ಅಧ್ಯಕ್ಷರೂ ಆಗಿರುವ ವಾಸಿಂ ರಿಜ್ವಿ ಕೆಲವು ದಿನಗಳ ಹಿಂದೆಯೇ ಈ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದರು. ಕುರಾನ್ನಲ್ಲಿನ ಕೆಲವು ಆಯತ್ಗಳು ದೇಶದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುತ್ತವೆ ಎಂದು ವಾಸೀಂ ರಿಜ್ವಿ ದೂರಿದ್ದರು. ಅಲ್ಲದೇ ಅಂತಹ ಭಾಗಗಳನ್ನು ಅಸಾಂವಿಧಾನಿಕ, ಪರಿಣಾಮಕಾರಿಯಲ್ಲದ, ಯಾವುದೇ ಕಾರ್ಯನಿರ್ವಹಿಸಿದ ಭಾಗಗಳೆಂದು ಘೋಷಿಸಲು ಅವರು ಅರ್ಜಿಯಲ್ಲಿ ಮನವಿ ಮಾಡಿದ್ದರು. ಅವರ ವಿರುದ್ಧ ಕೋಪಗೊಂಡಿದ್ದ ಕೆಲವು ಮುಸ್ಲಿಂ ಧಾರ್ಮಿಕ ಸಂಘಟನೆಗಳು ಎಫ್ಐಆರ್ ಸಹ ದಾಖಲಿಸಿದ್ದವು.