ಬೆಂಗಳೂರು, ಫೆ. 14: ಸಿನಿಮಾ ಪ್ರೇಮಿಗಳಿಗೆ ನವಿರಾದ ಪ್ರೇಮಕಥೆಯೊಂದನ್ನು ಹೇಳಲು ತಯಾರಾಗಿರುವ ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ “ಏಕ್ ಲವ್ ಯಾ” ಚಿತ್ರದ ಬ್ಯೂಟಿಫುಲ್ ಸಾಂಗ್ ‘ಯಾರೇ ಯಾರೇ’ ರಿಲೀಸ್ ಆಗಿದೆ.
“ಏಕ್ ಲವ್ ಯಾ” ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇದೀಗ ಪ್ರೇಮಿಗಳ ದಿನಕ್ಕೆ ವಿಶೇಷ ಉಡುಗೊರೆ ನೀಡಿರುವ ಚಿತ್ರತಂಡ ಯಾರೇ ಯಾರೇ ಎಂಬ ಹಾಡನ್ನು ತನ್ನ ಅಭಿಮಾನಿಗಳಿಗೆ ನೀಡಿದೆ.
ನಿರ್ದೇಶಕ ಪ್ರೇಮ್ ಅವರೇ ಬರೆದಿರುವ ಈ ಗೀತೆಯ ಸಾಲುಗಳಿಗೆ ಖ್ಯಾತ ಗಾಯಕ ಅರ್ಮಾನ್ ಮಲಿಕ್ ಧ್ವನಿಯಾಗಿದ್ದಾರೆ. ಕನ್ನಡ ಸ್ಟಾರ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಟ್ಯೂನ್ ಹಾಕಿದ್ದಾರೆ. ಬಿಡುಗಡೆಯಾದ ಕೆಲವೆ ಗಂಟೆಗಳಲ್ಲಿ ಈ ಸಾಂಗ್ ಯುಟ್ಯೂಬ್ ನಲ್ಲಿ ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. 10 ಸಾವಿರಕ್ಕೂ ಹೆಚ್ಚು ಮೆಚ್ಚುಗೆ ( ಲೈಕ್ಸ್ ) ಪಡೆದಿದೆ.
ಏಕ್ ಲವ್ ಯಾ ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದರೆ. ಈ ಚಿತ್ರದ ಮೂಲಕ ಪ್ರೇಮ್ ತಮ್ಮ ಬಾಮೈದ (ಪತ್ನಿ ರಕ್ಷಿತಾ ಪ್ರೇಮ್ ಸಹೋದರ) ರಾಣಾ ಅವರನ್ನು ನಾಯಕನಾಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಏಕ್ ಲವ್ ಯಾ ಸಿನಿಮಾದಲ್ಲಿ ರಚಿತಾ ರಾಮ್ ಮತ್ತು ರೇಷ್ಮಾ ಅಭಿನಯಿಸಿದ್ದಾರೆ. ನಟಿ ರಕ್ಷಿತಾ ಪ್ರೇಮ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.