ಜನರನ್ನು ವಿಭಜಿಸಿ ಮತಗಳಿಸಲು ಬಿಜೆಪಿ(BJP) ದೇಶದ ಇತಿಹಾಸವನ್ನು ತಿರುಚುತ್ತಿದೆ. ದೇಶದ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ. ಬಿಜೆಪಿ ನಾಯಕರು ಈ ನೀತಿಯನ್ನು ಸಾಮಾನ್ಯ ಎಂಬಂತೆ ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್(Congress) ಅಧ್ಯಕ್ಷೆ(President) ಸೋನಿಯಾ ಗಾಂಧಿ(Sonia Gandhi) ಕಳವಳ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ(Democracy) ಉಳಿಯಲು ಕಾಂಗ್ರೆಸ್ ಅನಿವಾರ್ಯ ಮತ್ತು ಅಗತ್ಯವಾಗಿದೆ. ಪಂಚ ರಾಜ್ಯಗಳ ಚುನಾವಣೆಯಲ್ಲಿ ನಮ್ಮ ಪಕ್ಷ ಕಳಪೆ ಸಾಧನೆ ಮಾಡಿದೆ. ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಆಘಾತಕಾರಿಯಾದದ್ದು, ನನಗೆ ತೀವ್ರ ನೋವುಂಟು ಮಾಡಿದೆ. ಆದರೆ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಿಗೆ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಅವಕಾಶ ಕಲ್ಪಿಸುವ ದೃಷ್ಟಿಯಿಂದ ಈ ಸಭೆ ಆಯೋಜಿಸಲಾಗಿದೆ.
ಪಕ್ಷದ ಮುಂದಿನ ಎಲ್ಲಾ ಸವಾಲುಗಳ ಕುರಿತು ಕಾರ್ಯಕರ್ತರು ಏನು ಹೇಳುತ್ತಾರೆ ಎಂಬುದನ್ನು ಕೇಳಲು ನಾವೆಲ್ಲರೂ ಇಲ್ಲಿ ಸೇರಿದ್ದೇವೆ ಎಂದರು. ಇನ್ನು ಬಿಜೆಪಿಯ ಒಡೆದಾಳುವ ನೀತಿಯಿಂದ ದೇಶದಲ್ಲಿ ಸಾಮರಸ್ಯ ಹಾಳಾಗುತ್ತಿದೆ. ಜನರ ಮಧ್ಯೆ ದ್ವೇಷ ಬಿತ್ತುವ ಕೆಲಸ ನಡೆಯುತ್ತಿದೆ. ಬಿಜೆಪಿಯ ಈ ಕುತಂತ್ರದ ವಿರುದ್ಧ ನಮ್ಮ ಪಕ್ಷ ಹೋರಾಟ ಮಾಡಬೇಕಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳನ್ನು ಟೀಕಿಸುತ್ತಿದ್ದರು. ಆದರೆ ಕೋವಿಡ್ ಸಂಕಷ್ಟ ಕಾಲದಲ್ಲಿ ಆಹಾರ ಭದ್ರತಾ ಕಾಯ್ದೆ ಮತ್ತು ನರೇಗಾ ಯೋಜನೆಗಳು ಜನರನ್ನು ಕಾಪಾಡಿದವು.
ಆದರೆ ಇದೀಗ ದೇಶದಲ್ಲಿ ತೀವ್ರ ಬೆಲೆ ಏರಿಕೆ ಉಂಟಾಗುತ್ತಿದೆ. ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹೀಗಾಗಿ ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು. ಇನ್ನು ಪಂಚರಾಜ್ಯಗಳ ಚುನಾವಣೆಯ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಸಂಸದೀಯ ಸದಸ್ಯರ ಸಭೆಯನ್ನು ಆಯೋಜಿಸಿತ್ತು. ಕಾಂಗ್ರೆಸ್ ಪಕ್ಷದ ಎರಡು ಸದನಗಳ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು.

ರಾಹುಲ್ ಗಾಂಧಿ, ಮನ್ ಮೋಹನ್ ಸಿಂಗ್ ಕೂಡಾ ಸಭೆಯಲ್ಲಿ ಹಾಜರಿದ್ದರು. ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಯಿತು.