ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಹಿನ್ನೆಲೆ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಸ್ಪಲ್ಪಮಟ್ಟಿನ ಚೇತರಿಕೆ ಕಾಣಿಸಿದೆ.
ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ನಡುವೆ ಎಸ್‍ಪಿಬಿ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣದಿಂದ ವೆಂಟಿಲೇಟರ್ ನೆರವಿನೊಂದಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಮಂಗಳವಾರ ಎಸ್‍ಪಿಬಿ ಅವರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಾಣಿಸಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿರುವುದಾಗಿ ಅವರ ಪುತ್ರ ಎಸ್.ಪಿ.ಚರಣ್ ಮಾಹಿತಿ ನೀಡಿದ್ದಾರೆ. ತಮ್ಮ ತಂದೆಯ ಆರೋಗ್ಯದ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಚರಣ್, ಅಪ್ಪನ ಆರೋಗ್ಯದ ಕುರಿತು ಆಸ್ಪತ್ರೆ ವೈದ್ಯರೊಂದಿಗೆ ಮಾತನಾಡಿದ್ದು, ಅವರ ಆರೋಗ್ಯ ಸ್ಥಿರವಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಶೀಘ್ರವೇ ಗುಣಮುಖರಾಗುವ ನಿರೀಕ್ಷೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.