`ಮುಂದಿನದು ಸ್ಪೋರ್ಟ್ಸ್‌ ಚಿತ್ರ’ : ರಮೇಶ್ ಅರವಿಂದ್

ರಮೇಶ್ ಅರವಿಂದ್ ಅವರು ನಿನ್ನೆ ತಾನೇ ಜನ್ಮದಿನದ ಸಂಭ್ರಮಾಚರಣೆ ಮಾಡಿಕೊಂಡಿದ್ದಾರೆ. ಅಂದಹಾಗೆ ನಿರೀಕ್ಷೆಯಂತೆ ಕುಟುಂಬ ವರ್ಗದೊಂದಿಗೆ ತೀರ ಸಣ್ಣಮಟ್ಟದಲ್ಲಿ ಜನ್ಮದಿನಾಚರಣೆ ಮಾಡಿದ್ದಾರೆ. ಆದರೆ ಬರ್ತ್‌ ಡೇ ಪ್ರಯುಕ್ತ ಬಿಡುಗಡೆಯಾಗಿರುವ `100′ ಚಿತ್ರದ ಹ್ಯಾಪಿ ಬರ್ತ್ ಡೇ ಸಾಂಗ್ ಮಾತ್ರ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದು ಮುನ್ನುಗ್ಗಿದೆ. ಈ ಸಂದರ್ಭದಲ್ಲಿ ಅವರನ್ನು ಮಾತನಾಡಿಸಿದ ವಿಜಯ ಟಾಕೀಸ್ ಮಾತನಾಡಿಸಿದಾಗ ಅವರು ಮುಂದೆ ಸ್ಪೋರ್ಟ್ಸ್ ಚಿತ್ರ ಮಾಡಲಿರುವ ಎಕ್ಸ್‌ಕ್ಲೂಸಿವ್ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಸದಾ ಪ್ರೋತ್ಸಾಹದಾಯಕ ಮಾತುಗಳನ್ನಾಡಿ ಉತ್ತೇಜಿಸುವ ರಮೇಶ್ ಅರವಿಂದ್ ಅವರು ಸ್ಪೋರ್ಟ್ಸ್ ಚಿತ್ರದಲ್ಲಿ ಚಕ್ ದೇ ಇಂಡಿಯಾದಂಥ ಸಬ್ಜೆಕ್ಟ್ ತೆಗೆದುಕೊಂಡು ಕೋಚ್ ಪಾತ್ರ ನಿರ್ವಹಿಸಿದರೆ ಖಂಡಿತವಾಗಿ ಅದು ಸ್ಪೋರ್ಟಿವ್ ಆಗಿರುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಬರ್ತ್ ಡೇ  ಮತ್ತು ಸಿನಿಮಾಗಳ ಕುರಿತಾದ ಎಲ್ಲ ವಿವರಗಳು ಇಲ್ಲಿವೆ ಓದಿ.

ಜನ್ಮದಿನ ಹೇಗಾಯಿತು?

ತುಂಬ ಸಿಂಪಲ್, ಸರಳವಾಗಿ ಆಯಿತು. ಮನೇಲಿ ಎಲ್ಲರೂ ಸೇರಿ ಕೇಕ್ ಕಟ್ ಮಾಡಿಸಿದ್ದಾರೆ. ಅದರೊಳಗೆ ಜೀವನದ ಪ್ರಮುಖ ಘಟ್ಟಗಳ ಭಾವಚಿತ್ರಗಳನ್ನು ಇರಿಸಿ ಸರ್ಪ್ರೈಸ್ ನೀಡಿದ್ದಾರೆ. ಉಳಿದಂತೆ ನಾನು ಯಾವತ್ತೂ ದೊಡ್ಡ ಮಟ್ಟದಲ್ಲಿ  ಸಾರ್ವಜನಿಕವಾಗಿ ಬರ್ತ್‌ ಡೇ ಮಾಡಿಕೊಂಡವನಲ್ಲ. ಮೊದಲೆಲ್ಲ ಬರ್ತ್ ಡೇ ಸೆಲೆಬ್ರೇಶನ್ ಮಾಡೋದು ಹಬ್ಬ ಮಾಡೋದು ಆ ತರಹ ಏನೂ ಇರಲಿಲ್ಲ. ಈಗ ಸೆಲೆಬ್ರಿಟಿ ಆದ ನಂತರ, ಸ್ಟಾರ್ ಅಂತ ಅನಿಸಿಕೊಂಡ ಮೇಲೆ ಮಾಧ್ಯಮಗಳ ಮೂಲಕ ಎಲ್ಲರಿಗೂ ನನ್ನ ಬರ್ತ್ ಡೇ ಡೇಟ್ ಗೊತ್ತಾಗ್ತಿದೆ. ಹಾಗಾಗಿ ಈ ಆಚರಣೆಗಳು ನಡೆಯುತ್ತವೆ. ಅಭಿಮಾನಿಗಳ ಜತೆ ಇರೋದು. ಅಥವಾ ಪಿಕ್ಚರ್ ಅಥವಾ ಮುಹೂರ್ತ ಮಾಡೋದು ಹಾಡು ರಿಲೀಸ್ ಮಾಡೋದು ಈ ತರಹ ವಿಷಯಗಳು ನಡೆಯುತ್ತಿವೆ. ನಿನ್ನೆಯಂತೂ ಬೆಳಿಗ್ಗೆ 10 ಗಂಟೆಗೆ ನಮ್ಮ ಲಿರಿಕಲ್ ವೀಡಿಯೋ ರಂಗು ರಂಗು ಪಾರ್ಟಿಗೆ ರವಿ ಬಸ್ರೂರ್ ಅವರ ರಾಗ ಸಂಯೋಜನೆಯಲ್ಲಿ, ರಮೇಶ್ ರೆಡ್ಡಿ ನಿರ್ಮಾಣದಲ್ಲಿ ನಾನು ನಿರ್ದೇಶಿಸಿ ಆಕ್ಟ್ ಮಾಡಿರುವಂತಹ `100′ ಎನ್ನುವ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ‌ಸಿನಿಮಾಗೆಂದು ಮಾಡಿದ ಆ ಬರ್ತ್ ಡೇ ಹಾಡು ನನ್ನ ಬರ್ತ್ ಡೇ ಸ್ಪೆಷಲ್ ಎನ್ನುವಂತೆ ಬಿಡುಗಡೆಯಾಗಿದೆ.

ಆದರೆ ಬರ್ತ್ ಡೇ ಹೆಸರಲ್ಲಿ ಇಷ್ಟೊಂದು ಬೈಗುಳ ನಿಮಗೆ ಸಿಕ್ಕಿರುವುದು ಇದೇ ಪ್ರಥಮ ಆಗಿರಬೇಕಲ್ಲವೇ?

(ನಗು)ಅದು  `100′ ಚಿತ್ರದ ಆ ಹಾಡಿನ ಸಂದರ್ಭ. ಹಾಡಲ್ಲಿ ರಚಿತಾ ರಾಮ್ ನನ್ನ ತಂಗಿಯಾಗಿ, ಪೂರ್ಣ ನನ್ನ ಹೆಂಡತಿಯಾಗಿ ಬೈದು ಗೋಳಾಡಿಸಿದ್ದಾರೆ. ಚಿತ್ರದಲ್ಲಿ ಈ ಸಂಬಂಧ ಒಂದು ಮಿಡ್ಲ್ ಕ್ಲಾಸ್ ಫ್ಯಾಮಿಲಿಯಲ್ಲಿ ಹೇಗಿರುತ್ತೋ ಆ ತರಹ ಇರುತ್ತದೆ. ಅಣ್ಣ ತಂಗಿ ಹೇಗಿರುತ್ತಾರೆಂದರೆ ಇಲಿ ಬೆಕ್ಕು ತರಹ ಬೈಯೋದು ಕಾಲೆಳೆಯುವುದು ಮಾಡ್ತಾ ಇರ್ತಾರೆ. ಅವಳ ಆ ಕಂಪ್ಲೇಂಟ್ ಜತೆಗೆ ಅಮ್ಮನ ಪಾತ್ರವೂ ಇದೆ. ಹಾಗಾಗಿ ಒಂದು ಇಡೀ ಕುಟುಂಬದ ಒಬ್ಬೊಬ್ಬರು ಹೆಂಗೆ ಕಾಲೆಳೆಯುತ್ತಾರೆ ಅನ್ನೋದೆ ಆ ಹಾಡಿನ ಸಂಕೇತವಾಗಿರುತ್ತೆ. ಅದನ್ನು ರವಿ ಬಸ್ರೂರ್ ಅವರು ಕುಂದಾಪುರ ಭಾಷೆಯಲ್ಲಿನ ಕೆಲವು ಬೈಗುಳಗಳು ಅಂದರೆ ಸ್ವೀಟಾದ ಬೈಗುಳಗಳನ್ನು ಸೇರಿಸಿ ಮಾಡಿದ್ದಾರೆ. ಅಂದರೆ ಅವು ಯಾವುದೇ ತಪ್ಪಾದ ಬೈಗುಳಗಳಲ್ಲ. ಇಡಿಯಟ್ ದಡ್ಡ ಈ ತರಹ ಭಾಷೆಗಳಷ್ಟೇ. ಅದಕ್ಕೆ ನಾನು ಕುಂದಾಪುರ ಮಾತ್ರವಲ್ಲ ಭಾಷೆಯಲ್ಲಿ ಹಾಕಿ ಸ್ವಲ್ಪ ಧಾರವಾಡ ಭಾಷೆಯಲ್ಲಿ ಹಾಕಿ ಮಜಾ ಇರುತ್ತೆ ಆಡಿಯನ್ಸ್ ಗೆ ಅಂದೆ. ಹಾಗಾಗಿ ಆ ಬೈಗುಳಗಳನ್ನೆಲ್ಲ ಸೇರಿಸಿ ಈ ತರಹ ಹಾಡು ಮಾಡಲಾಗಿದೆ. ಈ ಸಾಂಗ್ ಶೂಟ್ ಮಾಡಬೇಕಾದರೆ ನನ್ನ ಆಸೆ ಏನು ಇತ್ತೆಂದರೆ ಯಾರದೇ ಬರ್ತ್ ಡೇ ಇದ್ರೂ ಹ್ಯಾಪಿ ಬರ್ತ್ ಡೇ ಅಂತ ಇಂಗ್ಲೀಷ್ ನಲ್ಲಿ ಇದೆಯಲ್ಲ ಅದನ್ನು ಕನ್ನಡದಲ್ಲಿ ಮಾಡಿ ಒಂದು ಡ್ಯಾನ್ಸ್ ಮಾಡೋ ತರಹ ಇರಬೇಕು ಅನ್ನೋದೇ ನನ್ನ ಒರಿಜಿನಲ್ ಐಡಿಯಾ ಆಗಿತ್ತು.  ಆದರೆ‌ ಕೊರೊನಾದಿಂದ 100 ರಿಲೀಸ್ ಡಿಲೇ ಆಗಿ ನನ್ನ ಬರ್ತ್ ಡೇಗೆ ರಿಲೀಸ್ ಆಗಿದೆ.

ಈ ಹಾಡಿನ ಮೂಲಕ ನೀವು ನಟನೆ, ನಿರ್ದೇಶನದ ಜತೆಗೆ ಗಾಯನ ಕ್ಷೇತ್ರಕ್ಕೂ ಕಾಲಿಟ್ಟಂತಿದೆ?

ಹೌದು! ಆದರೆ ಹಾಡಿದ್ದೀನಾ ಅಂತ ನನಗೆ ಗೊತ್ತಿಲ್ಲ!! `ಬಿಸಿಬಿಸಿ’ ಚಿತ್ರದ ಹಾಡಿನ‌ ಕೊನೆಯಲ್ಲಿ ನಾಲ್ಕು ಲೈನ್ ಇಂಗ್ಲೀಷಲ್ಲಿ ಇತ್ತು. ಅದನ್ನು ಹಾಡಿದ ನೆನಪು ನನಗೆ.  ಈ ತರಹ ಫುಲ್ ಹಾಡನ್ನು ಹಾಡಿದ್ದು ಇದೇ ಮೊದಲು. ರವಿ ಬಸ್ರೂರು “ನೀವೇ ಹಾಡಬೇಕು; ಯಾಕೆಂದರೆ ತಂಗಿಯನ್ನು ರೇಗಿಸೋಕೆ ನಿಮ್ಮದೇ ಫೀಲಿಂಗ್ ಬೇಕು.‌ ಬೇರೆಯವರನ್ನು‌ ಹಾಡಿಸಿದ್ರೆ ಆ ಮಜಾ ಇರಲ್ಲ” ಅಂದ್ರು. ಹಾಗಾಗಿ ಸುಮ್ನೆ ಟ್ರೈ ಮಾಡಿದ್ದು. ಹಾಡಿದ್ದು ಅಂತ ಹೇಳೋಕ್ಕಾಗಲ್ಲ. ಸುಮ್ನೆ ಡೈಲಾಗ್ ತರಹ ಇದೆ ಅದು. ಎನಿವೇ ನಾನು ಹಾಡಿರೋ ಮೊದಲನೇ ಹಾಡು ಇದು ಅಂತ ಹೇಳಬಹುದು.

ಇದುವರೆಗೆ ನಿಮಗೆ ಮರೆಯಲಾಗದ ಜನ್ಮದಿನಾಚರಣೆ ಯಾವುದು?

ಆಗಲೇ ಹೇಳಿದಂತೆ ನಾನು ಬರ್ತ್ ಡೇ ಆಚರಿಸಿದ್ದು ಕಡಿಮೆ. ಆದರೆ ಬಹಳ ಇಂಟರೆಸ್ಟಿಂಗ್  ವಿಷಯ ಅಂದರೆ ನಾನು 8 ನೇ ಕ್ಲಾಸ್ ನಲ್ಲಿದ್ದಾಗ `ದೀಪಿಕಾ ಚಿಲ್ಡ್ರನ್ಸ್ ಲೀಗ್’  ಅಂತ ಒಂದು ಸ್ಟೂಡೆಂಟ್ಸ್  ಯೂನಿಯನ್ ಇತ್ತು. ಅದಕ್ಕೆ ನಾನು ಸೆಕ್ರೆಟರಿ ಆಗಿದ್ದೆ. ಅಲ್ಲಿ ನಾನು 9-10 ಕಾಂಪಿಟೇಶನ್ ನಲ್ಲಿ ನಾನು ಫಸ್ಟ್ ಪ್ರೈಸ್ ತಗೊಂಡಿದ್ದೆ. ಗವರ್ನರ್ ಗೋವಿಂದ್ ನಾರಾಯಣ್ ಅವರು ಚೀಫ್ ಗೆಸ್ಟ್ ಆಗಿದ್ದರು. `ಚರ್ಚೆಯಲ್ಲಿ ಫಸ್ಟ್ ಫ್ರೈಸ್’ ಅಂದರೂ ನಾನೇ `ಪ್ರಬಂಧದಲ್ಲಿ ಫಸ್ಟ್ ಪ್ರೈಸ್’ ಅಂದರೂ ನಾನೇ ಪ್ರಶಸ್ತಿ ತಗೋತಾ ಇರೋದನ್ನು ನೋಡಿದ ಅವರು, “ಎಲ್ಲಾ ಪ್ರೈಸ್ ನೀನೇ ತಗೋತೀಯಾ..? ಎಷ್ಟೋ ನಿನ್ನ ವಯಸ್ಸು?” ಅಂದ್ರು. ‌ನಾನು ವಯಸ್ಸು ಹೇಳೋ ಜತೆಗೆ ಇವತ್ತೇ ನನ್ನ ಬರ್ತ್ ಡೇ ಅಂದೆ. ಅದಕ್ಕೆ ಅವರು ನಾನು ಗಿಫ್ಟೇ ಕೊಟ್ಟಿಲ್ವಲ್ಲ ಅಂದ್ರು . “ನಾಳೆ ರಾಜಭವನಕ್ಕೆ ಬಾ ನಿನಗೆ ಗಿಫ್ಟ್ ಕೊಡ್ತೀನಿ” ಅಂದಿದ್ರು. ಹಾಗಾಗಿ ರಾಜಭವನದ ಮುಂದೆ ಹೋದೆ. ಆ ವಯಸ್ಸಿನಲ್ಲಿ ನಾನು ಒಬ್ಬನೇ ಹೋಗಿದ್ದೆ. ಆದರೆ ಅಲ್ಲಿ ನನಗೆ ಗೇಟ್ ಒಳಗೆ ಎಂಟ್ರಿ ಕೊಡಲಿಲ್ಲ ಅಂತ ನಾನು ವಾಪಾಸಾದೆ. ಬಹುಶಃ ಆಮೇಲೆ ಅವರಿಗೆ  ಈ ತರಹ ಹುಡುಗ ಗೇಟ ಹತ್ತಿರ ಬಂದು  ಹೋಗಿದ್ದಾನೆ ಎಂದು ಗೊತ್ತಾಗಿರಬೇಕು. ಹಾಗಾಗಿ ಅವರು ನನ್ನ ಮನೆಗೆನೇ ಸ್ಯಾಂಡಲ್ ವುಡ್ ಬ್ಯಾಟ್ ಒಂದನ್ನು ಕಳಿಸಿದ್ರು! ಅದೇ ನನಗೆ ಬಹಳ ವಿಶೇಷವಾದ ಬರ್ತ್ ಡೇ ಅಂತ ಹೇಳಬಹುದು.

ಜನ್ಮದಿನದ ಪ್ರಯುಕ್ತ ಹೊಸ ತೀರ್ಮಾನಗಳನ್ನು ತೆಗೆದುಕೊಂಡಿದ್ದೀರ?

ನಾನು ಬರ್ತ್ ಡೇ ಸ್ಪೆಷಲ್ ಅಂತ ಯಾವತ್ತೂ ಹೊಸ ರೆಸಲ್ಯುಶನ್ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ನನಗೆ ಪ್ರತಿದಿನವೂ ಸ್ಪೆಷಲ್ಲೇ. ನಿನ್ನೆಗಿಂತ ಇವತ್ತಿಗೆ ರಮೇಶ್ ಎಲ್ಲಾ ರೀತಿಯಲ್ಲಿ ಬೆಟರ್ ಆಗಿರಬೇಕು ಎನ್ನುವುದೇ ನನ್ನ ಅನಿಸಿಕೆ. ಅದು ವೃತ್ತಿಪರ ಆಗಿರಬಹುದು, ವೈಯಕ್ತಿಕವಾಗಿ ಇರಬಹುದು ಅಥವಾ ಸ್ವಭಾವದಲ್ಲಿ ಇರಬಹುದು. ಇನ್ನೊಂದು ಮೆಟ್ಟಿಲು ಜಾಸ್ತಿ ಹೋಗಬೇಕು. ಪ್ರತಿದಿನ ನನ್ನ ಬೆಟರ್ ಮಾಡ್ಕೋಬೇಕು ಎನ್ನೋದೇ ನನ್ನ ಪರ್ಮನೆಂಟ್ ರೆಸಲ್ಯೂಶನ್‌. ಅದು ಬರ್ತ್ ಡೇ ದಿನಾನೂ ನಡೆಯುತ್ತೆ. ಇನ್ನು ಮುಂದಿನ ಯೋಜನೆಯ ಬಗ್ಗೆ ಹೇಳುವುದಾದರೆ ಮುಂದಿನ ಸಿನಿಮಾದ ಸ್ಕ್ರಿಪ್ಟ್ ಬರೆದಿದ್ದೀನಿ. ಕ್ಲೈಮ್ಯಾಕ್ಸ್ ಬರೆಯಬೇಕು. ಅದು ಮುಗಿದ ಮೇಲೆ ಈ `100′ ನ ಥಿಯೇಟರ್ ಓಪನ್ ಆಗಿ ಜನ ಹೇಗೆ ಬರ್ತಾರೆ ಅಂತ ನೋಡಿ ಫಿಲ್ಮ್ ಬಿಡುಗಡೆ ಮಾಡಬೇಕಿದೆ. `100′ ರಿಲೀಸ್ ಮಾಡಿದ ಮೇಲೆ ಒಂದು ಹೊಸ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದೇನೆ. ಅದರ ನಿರ್ದೇಶನ ಮತ್ತು ಆಕ್ಟಿಂಗ್ ನಾನೇ ಮಾಡೋದು. ಈ ಸಲ ಒಂದು ಸ್ಪೋರ್ಟ್ಸ್ ಸಬ್ಜೆಕ್ಟ್ ತಗೊಂಡಿದ್ದೀನಿ. ಆ ಜಾನರ್ ಮಾಡಿಲ್ಲ.‌ ಹಾಗಾಗಿ ಅದನ್ನು ಮಾಡೋಣ ಅಂತ ಇದ್ದೀನಿ.

ಶಶಿಕರ ಪಾತೂರು

Latest News

ಮಾಹಿತಿ

ITR ಸಲ್ಲಿಕೆ ಗಡುವು ಜುಲೈ 31 ಅಂತ್ಯ ; ದಂಡ ಶುಲ್ಕವಿಲ್ಲದೆ ಯಾರೆಲ್ಲಾ ITR ಸಲ್ಲಿಸಬಹುದು ಗೊತ್ತಾ?

ಗಡುವು ಮುಗಿದರೂ ಯಾರೆಲ್ಲ ದಂಡ ಶುಲ್ಕವಿಲ್ಲದೆ ಐಟಿಆರ್‌ ಸಲ್ಲಿಸಬಹುದು, ಇದಕ್ಕೆ ಸಂಬಂಧಿಸಿದಂತೆ ನಿಯಮ ಏನು ಹೇಳುತ್ತದೆ ಎನ್ನುವ ವಿವರ ಇಲ್ಲಿದೆ. ಮುಂದೆ ಓದಿ,

ದೇಶ-ವಿದೇಶ

“ನನ್ನ ಮಕ್ಕಳಿಗೆ ಆಹಾರ ನೀಡಬೇಕೇ? ಅಥವಾ ಅವರನ್ನು ಕೊಲ್ಲಬೇಕೇ?”: ಬೆಲೆ ಏರಿಕೆ ಬಗ್ಗೆ ಪಾಕ್ ಮಹಿಳೆ ಆಕ್ರೋಶ!

ನನ್ನ ಮಕ್ಕಳಿಗೆ ಹಾಲು ಮತ್ತು ಔಷಧಿಗಳನ್ನು ಖರೀದಿಸುವುದು, ನನ್ನ ಮಕ್ಕಳಿಗೆ ಆಹಾರ ನೀಡುವುದು ಯಾವುದು ನನ್ನಿಂದ ಸಾಧ್ಯವಾಗುತ್ತಿಲ್ಲ.

ಮಾಹಿತಿ

ಬುದ್ದಿವಂತರು ಜಗಳವನ್ನು ಹೇಗೆ ತಪ್ಪಿಸುತ್ತಾರೆ ಗೊತ್ತೇ? ; ಈ ಅಚ್ಚರಿ ಮಾಹಿತಿ ಓದಿ

ಕೆಟ್ಟ ವಾಗ್ವಾದವನ್ನು ತಡೆಯುವುದು ಹೇಗೆ ಮತ್ತು ಅದನ್ನು ಸರಿಯಾಗಿ ರೀತಿಯಲ್ಲಿ ಹೇಗೆ ನಿಭಾಯಿಸಬಹುದು ಎನ್ನುವುದಕ್ಕಾಗಿ ಕೆಲವು ಉಪಾಯಗಳು ಇಲ್ಲಿವೆ ನೋಡಿ.

ರಾಜಕೀಯ

ನಿತೀಶ್‌ ಕುಮಾರ್‌ ಪ್ರಧಾನಿಯಾಗುವ ಭ್ರಮೆಯಲ್ಲಿದ್ದಾರೆ, ಅದಕ್ಕಾಗಿ ವಿಪಕ್ಷಗಳ ಕೂಟ ಸೇರಿದ್ದಾರೆ : ಬಿಜೆಪಿ

ಇದು ‘ಆಯಾ ರಾಮ್, ಗಯಾ ರಾಮ್ʼ ಕಾಯಿಲೆಗೆ ಉದಾಹರಣೆ. ಹಡಗು ಜಿಗಿದು ದಾಖಲೆ ನಿರ್ಮಿಸಿದ್ದಾರೆ. ಅವರು ಉನ್ನತ ಕುರ್ಚಿಗೆ ಹಾತೊರೆಯುತ್ತಿದ್ದಾರೆ.