ಕೊಲೊಂಬೊ, ಮೇ. 07: ಭಾರತದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದಿಂದ ಬರುವ ಪ್ರಯಾಣಿಕರಿಗೆ ಶ್ರೀಲಂಕಾ ನಿರ್ಬಂಧ ಹೇರಿದೆ. ಬ್ರಿಟನ್, ಯುಎಇ, ಆಸ್ಟ್ರೇಲಿಯಾ ಮತ್ತು ಸಿಂಗಾಪುರದಂತಹ ಹಲವಾರು ದೇಶಗಳು ಈಗಾಗಲೇ ಭಾರತ ಮತ್ತು ದಕ್ಷಿಣ ಏಷ್ಯಾದ ಇತರ ದೇಶಗಳ ಪ್ರಯಾಣಿಕರನ್ನು ನಿಷೇಧಿಸಿವೆ. ಭಾರತದಿಂದ ಪ್ರಯಾಣಿಕರನ್ನು ಶ್ರೀಲಂಕಾದಲ್ಲಿ ಇಳಿಯಲು ಅನುಮತಿಸುವುದಿಲ್ಲ ಎಂದು ಶ್ರೀಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಗುರುವಾರ ತಿಳಿಸಿದೆ.
ಶ್ರೀಲಂಕಾದಲ್ಲಿಯೂ ಕೊವಿಡ್ ಪ್ರಕರಣಗಳು ಏರಿಕೆಯಾಗುತ್ತಿವೆ. ಕಳೆದ 5 ದಿನಗಳಲ್ಲಿ ಸುಮಾರು 2,000 ಹೊಸ ಪ್ರಕರಣಗಳು ವರದಿಯಾಗಿವೆ. ಏಪ್ರಿಲ್ ಮಧ್ಯದವರೆಗೆ ದಿನಕ್ಕೆ ಸರಾಸರಿ 200 ಪ್ರಕರಣಗಳು ಪತ್ತೆಯಾಗಿವೆ.
ಏಪ್ರಿಲ್ ಮಧ್ಯ ಭಾಗದಲ್ಲಿ ಹೊಸ ವರ್ಷದ ಆಚರಣೆ ನಡೆದಿತ್ತು. ಬ್ರಿಟನ್ ರೂಪಾಂತರಿಯಾಗಿರುವ ಈ ವೈರಸ್ ವೇಗವಾಗಿ ಹರಡುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀಲಂಕಾವು ಪಶ್ಚಿಮ ಏಷ್ಯಾ ಮತ್ತು ಸಿಂಗಾಪುರದಂತಹ ಇತರ ಸ್ಥಳಗಳಿಗೆ ಭೇಟಿ ನೀಡುವ ಭಾರತೀಯರಿಗೆ ಸಾರಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸಿತ್ತು, ಇದಕ್ಕೂ ಮೊದಲು ಅವರು ಶ್ರೀಲಂಕಾ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ವ್ಯವಸ್ಥೆ ಮಾಡಿರುವ ಕ್ವಾರಂಟೈನ್ ಕೇಂದ್ರದಲ್ಲಿ 14 ದಿನಗಳ ಕಾಲ ಇರಬೇಕಿತ್ತು.