ಕೊಲಂಬೊ: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ(Srilanka) ಅರಾಜಕತೆ ತೀವ್ರಗೊಂಡಿದೆ. ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಜನಾಕ್ರೋಶ ಸ್ಪೋಟಗೊಂಡಿದೆ. ಸಾವಿರಾರೂ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಪ್ರಧಾನಿ(PrimeMinister) ಮತ್ತು ಅಧ್ಯಕ್ಷರ(President) ಮನೆಗಳಿಗೆ ಬೆಂಕಿ ಹಚ್ಚಿ, ಅವುಗಳನ್ನು ಪ್ರತಿಭಟನಾಕಾರರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರ ಅಧಿಕೃತ ನಿವಾಸ `ಟೆಂಪಲ್ ಟ್ರೀ’ ಮತ್ತು ಅಧ್ಯಕ್ಷ ಗೊಟಬಯ ರಾಜಪಕ್ಸ(Gotabaya Rajapaksa) ಅವರ ಅಧಿಕೃತ ನಿವಾಸಗಳನ್ನು ವಶಕ್ಕೆ ಪಡೆದಿರುವ ಪ್ರತಿಭಟನಾಕಾರರು ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಪರಿಸ್ಥಿತಿ ಸಂಪೂರ್ಣ ಕೈತಪ್ಪಿದ್ದು, ಪ್ರಧಾನಿ ರನಿಲ್ ವಿಕ್ರಮಸಿಂಘೆ ಮತ್ತು ಅಧ್ಯಕ್ಷ ಗೊಟಬಯ ರಾಜಪಕ್ಸ ಸಹಿತ ಸರ್ಕಾರದ ಭಾಗವಾಗಿರುವ ಎಲ್ಲ ರಾಜಕೀಯ ನಾಯಕರು ರಾಜೀನಾಮೆ(Resign) ನೀಡಿದ್ದಾರೆ. ಪ್ರತಿಭಟನಾಕಾರರಿಂದ ಪಾರಾಗಲು ದೇಶ ತೊರೆಯಲು ಅನೇಕ ರಾಜಕೀಯ ನಾಯಕರು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.
ಸರ್ಕಾರದ ಎಲ್ಲ ಸಚಿವರು ರಾಜೀನಾಮೆ ನೀಡಿದ್ದು, ಇದೀಗ ಶ್ರೀಲಂಕಾದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಈ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಚರ್ಚೆ ನಡೆಸಲು ವಿರೋಧ ಪಕ್ಷಗಳು ಸರ್ವಪಕ್ಷಗಳ ಸಭೆ ಕರೆದಿವೆ. ಆದರೆ ವಿರೋಧ ಪಕ್ಷಗಳಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ಬಿಕ್ಕಟ್ಟಿನ ಕುರಿತು ಜನರಲ್ಲಿ ಭಾರಿ ಆಕ್ರೋಶ ಸೃಷ್ಟಿಯಾಗಿದೆ. ಹೀಗಾಗಿ ಸರ್ಕಾರ ರಚಿಸಲು ವಿರೋಧ ಪಕ್ಷಗಳು ಕೂಡಾ ಮುಂದೆ ಬರುತ್ತಿಲ್ಲ. ಸರ್ವಪಕ್ಷಗಳನ್ನು ಒಳಗೊಂಡ ಮಧ್ಯಂತರ ಸರ್ಕಾರ ರಚಿಸಲು ವಿರೋಧ ಪಕ್ಷಗಳು ಆಸಕ್ತಿ ತೋರಿವೆ.
ಮಧ್ಯಂತರ ಸರ್ಕಾರ ರಚಿಸಿ, ಶೀಘ್ರದಲ್ಲೇ ಸಾರ್ವತ್ರಿಕ ಚುನಾವಣೆ ನಡೆಸುವ ಕುರಿತು ಚರ್ಚೆ ನಡೆದಿದೆ. ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಮತ್ತು ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಕುಟುಂಬ ದೇಶ ತೊರೆಯುವ ಸಾಧ್ಯತೆ ಹೆಚ್ಚಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯಿಂದಲೂ ರಾಜಪಕ್ಸೆ ಕುಟುಂಬ ದೂರ ಉಳಿಯಲಿದೆ ಎನ್ನಲಾಗಿದೆ.