ಕಾಮನ್ ಮ್ಯಾನ್ ಎಂದೇ ಖ್ಯಾತಿಯ ಬಸವರಾಜ ಬೊಮ್ಮಾಯಿ ಅವರ ಮೊದಲ ಬಜೆಟ್ಗೆ ದಿನಗಣನೆ ಶುರುವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಚೊಚ್ಚಲ ಬಜೆಟ್ಗೆ ದಿನಗಣನೆ ಶುರುವಾಗಿದೆ. ಮಾರ್ಚ್ 4 ರಂದು ಮುಖ್ಯಮಂತ್ರಿಗಳು ಆಯವ್ಯಯ ಮಂಡಿಸಲಿದ್ದಾರೆ. ಫೆ.18 ರಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. 12.30ಕ್ಕೆ ಸಚಿವ ಸಂಪುಟದ ಸಭೆ ನಡೆಸಲಾಯ್ತು. ಸಭೆ ಬಳಿಕ ಬಜೆಟ್ ಮಂಡನೆಯ ದಿನಾಂಕವನ್ನು ಘೋಷಣೆ ಮಾಡಲಾಗಿದೆ. 2023ಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಬಾರಿಯ ಬಜೆಟ್ ಮೇಲೆ ಜನರು ಹಲವು ನಿರೀಕ್ಷೆ ಹೊಂದಿದ್ದಾರೆ. ಜನಪ್ರಿಯ ಬಜೆಟ್ ಮಂಡನೆಗೆ ಸರ್ಕಾರ ಕೂಡ ಭರ್ಜರಿ ತಯಾರಿ ನಡೆಸಿದೆ. ಆದ್ರೆ ಹಣಕಾಸು ಇಲಾಖೆಯ ಮೂಲದ ಪ್ರಕಾರ ರಾಜ್ಯ ಸರ್ಕಾರದ ಖಜಾನೆ ಸಂಪನ್ನವಾಗಿಲ್ಲ ಅನ್ನೋ ಮಾತುಗಳು ಕೇಳಿ ಬರ್ತಿದೆ.

ಬೊಮ್ಮಾಯಿ ಬಜೆಟ್ ಮೇಲೆ ಭಾರೀ ನಿರೀಕ್ಷೆ :
ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡಿಸಲಿದ್ದಾರೆ. ಹೀಗಾಗಿ ರಾಜ್ಯ ಬಜೆಟ್ ಮೇಲೆ ಜನರು ಭಾರೀ ನಿರೀಕ್ಷೆ ಹೊಂದಿದ್ದಾರೆ. ನೀರಾವರಿ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಎಷ್ಟು ಅನುದಾನ ನೀಡಲಿದ್ದಾರೆ. ಯಾವ ಯಾವ ಜಿಲ್ಲೆಗಳಿಗೆ ಎಷ್ಟು ಅನುದಾನ ಸಿಗಲಿದೆ ಅನ್ನೋದು ಸದ್ಯದ ಕುತೂಹಲವಾಗಿದೆ.
ಈ ಬಾರಿ ಸಂತ್ರಸ್ತರಿಗೆ ಸಿಗುತ್ತಾ ಶಾಶ್ವತ ಪರಿಹಾರ? :
ಬೆಳಗಾವಿ, ಖಾನಾಪುರ, ಹುಕ್ಕೇರಿ, ಸವದತ್ತಿ, ಗೋಕಾಕ್, ಚಿಕ್ಕೋಡಿ, ಅಥಣಿ ಸೇರಿದಂತೆ ನೆರೆ ಉಂಟಾಗಿದ್ದ ಹಲವು ಪ್ರದೇಶದ ಜನರು ಪರಿಹಾರದ ಭರವಸೆ ಹೊಂದಿದ್ದಾರೆ. ಹಾನಿ ತಪ್ಪಿಸಲು ಶಾಶ್ವತ ಯೋಜನೆ ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ನದಿಗಳ ಸಮೀಪವಿರೋ ಪ್ರವಾಹ ಭಾದಿತ ಗ್ರಾಮಗಳ ಸ್ಥಳಾಂತರ ಹಾಗೂ ಪುನರ್ವಸತಿಗೆ ಕ್ರಮಕೈಗೊಳ್ಳುವಂತೆ ಜನರು ಆಗ್ರಹಿಸುತ್ತಿದ್ದಾರೆ.
ರಸ್ತೆ , ಪ್ರವಾಸಿ ತಾಣ ಅಭಿವೃದ್ಧಿ, ಮಹಾನಗರದ ಸಂಚಾರ ದಟ್ಟಣೆಗೆ ಪರಿಹಾರೋಪಯವಾಗಿ ರಸ್ತೆ ನಿರ್ಮಿಸಬೇಕು. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೆ ಹೆಚ್ಚಿದ ಒತ್ತಾಯ. ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಒದಗಿಸಬೇಕು ಹಾಗೂ ನಗರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆಯಾಗೋ ನಿರೀಕ್ಷೆಯಲ್ಲಿ ಬೆಳಗಾವಿ ಜನರಿದ್ದಾರೆ.

ರಾಜ್ಯ ಬಜೆಟ್ನಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡಲು ಆಗ್ರಹ :
ಈ ಬಾರಿಯ ಬಜೆಟ್ನಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಸಿರೆಲೆ ಗೊಬ್ಬರ, ಬಿತ್ತನೆ ಬೀಜ, ಸಮರ್ಪಕ ವಿತರಣೆ, ಪ್ರತಿ ಗ್ರಾಮಕ್ಕೂ ಸಬ್ಸಿಡಿ ದರದಲ್ಲಿ ಒಕ್ಕಣೆ, ಯಂತ್ರ ಹಾಗೂ ಎರೆಹುಳ ಗೊಬ್ಬರ ತಯಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಬಾರಿಯಾದರೂ ಮುಂಗಡ ಪತ್ರದಲ್ಲಿ ಅನುದಾನ ಬಿಡುಗಡೆಯಾಗಲಿ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಸಬ್ಸಿಡಿ ದರದಲ್ಲಿ ಒಕ್ಕಣೆ ಯಂತ್ರಕ್ಕೆ ರೈತರ ಒತ್ತಾಯ :
ಹಸಿರೆಲೆ ಗೊಬ್ಬರ ಬಿತ್ತನೆ ಬೀಜಕ್ಕಾಗಿ ಆಂಧ್ರ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಮತ್ತಿತರ ರಾಜ್ಯಗಳನ್ನು ಅವಲಂಬಿಸಬೇಕಿರುವುದರಿಂದ ಸಕಾಲದಲ್ಲಿ ಸಮರ್ಪಕ ಹಾಗೂ ಕಡಿಮೆ ದರದಲ್ಲಿ ಬಿತ್ತನೆ ಬೀಜಗಳು ದೊರೆಯುತ್ತಿಲ್ಲ. ಅದೇ ರೀತಿ ಒಕ್ಕಣೆ ಸಮಯದಲ್ಲಿ ರೈತರು ಬೆಳೆಗಳನ್ನು ರಸ್ತೆಗಳಲ್ಲಿ ಹಾಕುವುದರಿಂದ ಅದರ ಗುಣಮಟ್ಟದ ಜತೆಗೆ ಪ್ರಮಾಣವೂ ಕುಂಠಿತಗೊಳ್ಳುತ್ತಿದೆ. ಹಾಗಾಗಿ ಪ್ರತಿ ಗ್ರಾಮಕ್ಕೂ ಸಬ್ಸಿಡಿ ದರದಲ್ಲಿ ಒಕ್ಕಣೆ ಯಂತ್ರ ವಿತರಿಸಿದರೆ ಕೃಷಿಕರಿಗೂ ಅನುಕೂಲ, ಸಾರ್ವಜನಿಕರ ಸಮಸ್ಯೆಯೂ ಪರಿಹಾರವಾಗುತ್ತದೆ. ಇದರೊಂದಿಗೆ ಎರೆಹುಳು ಗೊಬ್ಬರ ತಯಾರಿಕಾ ಘಟಕಕ್ಕೆ ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಇನ್ನಷ್ಟು ಪ್ರೋತ್ಸಾಹದ ನಿರೀಕ್ಷೆಯಲ್ಲಿ ರೈತರು ಇದ್ದಾರೆ.