ರಾಜ್ಯಸಭಾ ಚುನಾವಣೆಯಲ್ಲಿ(Rajyasabha Election) ‘ಜಾತ್ಯಾತೀತ’ ಶಕ್ತಿಗಳು ಒಂದಾಗಬೇಕು. ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕೆಂದು ಭಾಷಣ ಮಾಡುತ್ತಲೇ, ವೈಯಕ್ತಿಕ ಪ್ರತಿಷ್ಠೆಗಾಗಿ ಬಡಿದಾಡಿದ ಕಾಂಗ್ರೆಸ್-ಜೆಡಿಎಸ್(Congress-JDS) ನಾಯಕರಿಗೆ ರಾಜ್ಯಸಭಾ ಸೋಲು ಸಮಾಧಾನ ತಂದಿದೆ.

ಕಾಂಗ್ರೆಸ್ ಗೆಲ್ಲಲಿಲ್ಲ ಎಂದು ಜೆಡಿಎಸ್ ನಾಯಕರು, ಜೆಡಿಎಸ್ ಗೆಲ್ಲಲಿಲ್ಲ ಎಂದು ಕಾಂಗ್ರೆಸ್ ನಾಯಕರು ಸಮಾಧಾನ ಮಾಡಿಕೊಂಡಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋಲು ಮತ್ತು ಜೆಡಿಎಸ್ನ ಇಬ್ಬರು ಶಾಸಕರು ಅಡ್ಡ ಮತದಾನ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಎಚ್.ಡಿ.ಕುಮಾರಸ್ವಾಮಿ(HD Kumarswamy) ಅವರು, ಬಿಜೆಪಿಯ ಬಿ ಟೀಮ್ ಆಗಿ ಕಾಂಗ್ರೆಸ್ ಕೆಲಸ ಮಾಡಿದೆ. ಬಿಜೆಪಿ ಅಭ್ಯರ್ಥಿ ಗೆಲ್ಲಲು ಕಾಂಗ್ರೆಸ್ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡಿದೆ ಎಂದು ಟೀಕಿಸಿದ್ದಾರೆ.
ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಮ್(B Team) ಎಂದು ಟೀಕಿಸುತ್ತಿದ್ದ, ಸಿದ್ದರಾಮಯ್ಯನವರಿಗೆ(Siddaramaiah) ಈ ಮೂಲಕ ಟಾಂಗ್ ನೀಡಿದ್ದಾರೆ. ಇನ್ನು ಬಿಜೆಪಿಯ ಗೆಲುವಿಗೆ ಸಿದ್ದರಾಮಯ್ಯನವರು ಪರೋಕ್ಷವಾಗಿ ಕಾರಣ. ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಮ್ ಎಂದು ಟೀಕಿಸುವ ನೈತಿಕತೆ ಅವರಿಗಿದೆಯೇ..? ಎಂಬ ನೈತಿಕ ಪ್ರಶ್ನೆಯನ್ನು ಎಚ್ಡಿಕೆ ಎತ್ತಿದ್ದಾರೆ. ಇನ್ನೊಂದೆಡೆ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಸೋಲಿಸಲು ಜೆಡಿಎಸ್ ಬಿಜೆಪಿಗೆ ಸಹಕರಿಸಿತು ಎನ್ನುವ ಮೂಲಕ ಅಲ್ಪಸಂಖ್ಯಾತ ರಾಜಕೀಯ ತಂತ್ರವನ್ನು ಸಿದ್ದರಾಮಯ್ಯ ಪ್ರಯೋಗಿಸಿದ್ದಾರೆ.

ಒಟ್ಟಾರೆಯಾಗಿ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪ್ರಯೋಗಿಸಿದ ರಾಜಕೀಯ ತಂತ್ರ-ಪ್ರತಿತಂತ್ರಗಳ ನಡುವೆ ಬಿಜೆಪಿಗೆ ಲಾಭವಾಗಿದೆ. ಎರಡು ಪಕ್ಷಗಳಿಗೂ ನೈತಿಕತೆ ಯಾವುದು..? ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಮತಬ್ಯಾಂಕ್(Voterbank) ಕೇಂದ್ರೀತ ರಾಜಕೀಯದಲ್ಲಿ ನೈತಿಕತೆ ಮಾಯವಾಗಿ ದಶಕಗಳೇ ಕಳೆದಿವೆ. ಅಭ್ಯರ್ಥಿ ಸೋಲುಂಡರು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ವೈಯಕ್ತಿಕವಾಗಿ ಗೆದ್ದು ಬೀಗಿದ್ದಾರೆ.