ರಾಜ್ಯದಲ್ಲಿ ಉದ್ಬವಿಸಿದ್ದ ಹಿಜಾಬ್- ಕೇಸರಿ ಸಂಘರ್ಷದಿಂದಾಗಿ ಶಾಲ ಕಾಲೇಜಿಗೆ 3 ದಿನ ರಜೆ ಘೋಷಿಸಲಾಗಿತ್ತು. ಆದರೆ ರಾಜ್ಯದಲ್ಲಿ ಹಿಜಾಬ್ ಸಂಘರ್ಷದ ನಡುವೆ ಹೈಕೋರ್ಟ್ನಿಂದ ಶಾಲೆಗಳನ್ನು ಆರಂಭಿಸಲು ಆದೇಶ ಬಂದ ಹಿನ್ನೆಲೆ ಸೋಮವಾರದಿಂದ ಹತ್ತನೇ ತರಗತಿವರೆಗೆ ಎಲ್ಲಾ ಶಾಲೆಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ.
ಶಕ್ತಿ ಭವನದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಎಂ ಬಸವರಾಜ ಬೊಮ್ಮಾಯಿ ಅವರು, ಕಳೆದ ಕೆಲವು ದಿನಗಳಿಂದ ಶಾಲೆಗಳಲ್ಲಿ ಡ್ರೆಸ್ ಕೋಡ್ ವಿವಾದ ಶುರುವಾಗಿತ್ತು. ಬಳಿಕ ಅದು ಹೈಕೋರ್ಟ್ ಮೆಟ್ಟಿಲೇರಿತ್ತು.

ಇದೀಗ ನ್ಯಾಯಾಲಯ ನೀಡಿರುವ ಸೂಚನೆಯನ್ನು ಸರ್ಕಾರ ಗೌರವಿಸುತ್ತದೆ. ಮೊದಲ ಹಂತವಾಗಿ 10ನೇ ತರಗತಿವರೆಗೆ ಶಾಲೆಗಳನ್ನು ಸೋಮವಾರದಿಂದ ಆರಂಭಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು. ಶಾಲಾ ಮಕ್ಕಳು ಸಂಯಮದಿಂದ ವರ್ತಿಸುತ್ತಿದ್ದಾರೆ, ಅವರಿಗೆ ಪ್ರೀತಿಯ ಅಭಿನಂದನೆ ಸಲ್ಲಿಸುತ್ತೇನೆ. ಮೊದಲ ಹಂತದಲ್ಲಿ ಹತ್ತನೇ ತರಗತಿವರೆಗೆ ಆರಂಭದ ಬಳಿಕ ಎರಡನೇ ಹಂತದಲ್ಲಿ ಪಿಯುಸಿ ಮತ್ತು ಡಿಗ್ರಿ ಕಾಲೇಜ್ಗಳನ್ನು ಆರಂಭಿಸುತ್ತೇವೆ. ನಾಳೆ ಸಂಜೆ ಸಚಿವರ ಜೊತೆ ಸೇರಿ ವೀಡಿಯೋ ಕಾನ್ಫರೆನ್ಸ್ ಮಾಡುತ್ತೇನೆ ನಂತರ ಕಾಲೇಜುಗಳ ಆರಂಭದ ಬಗ್ಗೆ ಪ್ರಕಟಣೆ ಹೊರಡಿಸುತ್ತೇವೆ ಎಂದು ತಿಳಿಸಿದರು.

ಸಭೆಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಗೃಹ ಸಚಿವ ಆರಗ ಜ್ಞಾನೇಂದ್ರ, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಅಡ್ವೋಕೆಟ್ ಜನರಲ್ ಪ್ರಬುಲಿಂಗ ನಾವಡಗಿ ಭಾಗವಹಿಸಿದ್ದರು.