ಮೈಸೂರು, ಜ. 14: ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಹಾಗೂ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ನಡುವಿನ ವಾಕ್ ಸಮರ ಮುಂದುವರಿದಿದೆ. ದೈಹಿಕ, ಮಾನಸಿಕವಾಗಿ ಸ್ಟ್ರೋಕ್ ಆಗಿರೋದು ವಿಶ್ವನಾಥ್ ಗೆ ಹೊರತು ಯಡಿಯೂರಪ್ಪ ಅವರಿಗಲ್ಲಾ ಎಂದು ಶಾಸಕ ಸಾ.ರಾ. ಮಹೇಶ್ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟ್ರೋಕ್ ಆಗಿ ಮಲಗಿದ್ದಾಗ ನಿಮಗೆ ಚೈತನ್ಯ ತುಂಬಿದ್ದು ಜನತಾದಳ. ಆದರೆ ಪಕ್ಷಕ್ಕೆ ದ್ರೋಹ ಮಾಡಿದ್ದರ ಪರಿಣಾಮವನ್ನು ಈಗ ಎದುರಿಸಿದ್ದೀರಿ. ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಶಾಪಕ್ಕೆ ತುತ್ತಾಗಿದ್ದೀರಿ. ಈಗ ಮತ್ತೆ ಯಡಿಯೂರು ಸಿದ್ದಲಿಂಗೇಶ್ವರರನ್ನು ಎಳೆಯ ಬೇಡಿ. ಈಗಿರುವ ಎಂ.ಎಲ್.ಸಿ ಸ್ಥಾನವೂ ಹೋಗಿಬಿಡುತ್ತೆ ಎಂದು ಸಲಹೆ ನೀಡಿದರು.
ವಿಶ್ವನಾಥ್ ಅವರ ಸಿಡಿ ಆರೋಪಕ್ಕೆ ಟಾಂಗ್ ನೀಡಿದ ಶಾಸಕ ಸಾ.ರಾ. ಮಹೇಶ್, ವಿಶ್ವನಾಥ್ ಒಬ್ಬ ದುರಾಸೆ ಮನುಷ್ಯ, ಬರೀ ಶಾಸಕನಾದ್ರೆ ಸಾಕು ಅಂತಾ ಅಂಗಲಾಚಿ ಜೆಡಿಎಸ್ ಸೇರಿದ್ದೀರಾ. ಶಾಸಕನಾದ ಮೇಲೆ ಮಂತ್ರಿ ಆಗಬೇಕು ಅನ್ನೋ ದುರಾಸೆ. ಇದೇ ಕಾರಣಕ್ಕೆ ಜೆಡಿಎಸ್ ತೊರೆದು ಬಿಜೆಪಿ ಜೊತೆ ಹೋದಿರಿ. ಈಗ ಬಿಜೆಪಿಯಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲವೆಂದು ಯಡಿಯೂರಪ್ಪ ಅವರನ್ನು ಬೈಯುತ್ತಿದ್ದೀರಿ. ನಿಮಗೆ ಕೃತಜ್ಞತೆ ಅನ್ನೋದೇ ಇಲ್ಲ. ಯಾರು ನಿಮಗೆ ಸಹಾಯ ಮಾಡ್ತಾರೋ ಅವರನ್ನೇ ನಿಂದಿಸುವುದು ನಿಮ್ಮ ಜಾಯಮಾನ. ಮತ್ತೆ ದುರಾಸೆ ಮಾಡಿದ್ರೆ ಈಗಿರೋ ಸ್ಥಾನವೂ ಹೋಗುತ್ತೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ ಶಾಸಕ ಸಾ.ರಾ.ಮಹೇಶ್, ಬಿಜೆಪಿ ಸರಕಾರ ಅವಧಿಗೆ ಮುನ್ನ ಬೀಳಲ್ಲ. ಜೆಡಿಎಸ್ ಗಿಂತ ಜಾಸ್ತಿ ದಿನ ನಾನು ಬಿಜೆಪಿಯನ್ನ ನೋಡಿದ್ದೇನೆ. ಯಡಿಯೂರಪ್ಪ ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಅವರನ್ನು ಪ್ರೀತಿಯಿಂದ ಗೆಲ್ಲಬಹುದೇ ಹೊರತು, ಹೆದರಿಸಿ ಬೆದರಿಸಿ ಗೆಲ್ಲಲು ಆಗಲ್ಲ. ಬಿಜೆಪಿ ಸರ್ಕಾದ ಐದು ವರ್ಷಕ್ಕೆ ಮುಂಚೆ ಒಂದು ದಿನವೂ ಅಧಿಕಾರ ಬಿಡಲ್ಲ. ಯಡಿಯೂರಪ್ಪ ಯಾವತ್ತೂ ಮಾತು ತಪ್ಪಿಲ್ಲ. 17 ಮಂದಿ ಪೈಕಿ 15 ಮಂದಿಯನ್ನು ಮಂತ್ರಿ ಮಾಡಿದ್ದಾರೆ. ಮತ್ತಿಬ್ಬರಿಗೆ ಅವಕಾಶ ಸಿಕ್ಕಿಲ್ಲ. ಆದರೆ ನಿಮಗೆ ಕೃತಜ್ಞತೆ ಅನ್ನೋದೇ ಇಲ್ಲದ್ದಕ್ಕೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಅಷ್ಟೆ ಎಂದರು.