ತುಮಕೂರು : ರಾಜ್ಯದ ತುಮಕೂರು(Tumkuru) ಜಿಲ್ಲೆಯ ಊರ್ಡಿಗೆರೆ ಶಾಲೆಯ ವಿದ್ಯಾರ್ಥಿ ಇಂಗ್ಲೀಷ್(English) ಓದಲು ಕಷ್ಟಕರವಾಗುತ್ತಿದೆ ಎಂದು ದುಡುಕಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಈಗ ಬೆಳಕಿಗೆ ಬಂದಿದೆ.

ಹೌದು, ಊರ್ಡಿಗೆರೆ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಇಂಗ್ಲೀಷ್ ಕಲಿಯಲು ತನಗೆ ಕಷ್ಟವಾಗುತ್ತಿದೆ ಎಂದು ಮನೆಯಲ್ಲಿ ಅಳಲು ತೋಡಿಕೊಂಡಿದ್ದಾನೆ, ಜೊತೆಗೆ ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದ್ದಿದ್ದಾನೆ. ಆದ್ರೆ, ಪೋಷಕರು ಬುದ್ದಿ ಹೇಳಿ ಶಾಲೆಗೆ ಹೋಗುವಂತೆ ಮನವರಿಕೆ ಮಾಡಿದ್ದಾರೆ. ತಾನು ಶಾಲೆಗೆ ಹೋಗುವುದಿಲ್ಲ ಎಂದರೂ ಕೂಡ ಬಲವಂತ ಮಾಡಿದ ಪೋಷಕರ ಹೇಳಿಕೆ ಹಿನ್ನಲೇ, ಬೆಳಗ್ಗೆ 7 ಗಂಟೆ ಸಮಯಕ್ಕೆ ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.
ವಿಷ ಸೇವಿಸಿದ ನಂತರ ಪ್ರಜ್ಞಾಹಿನ ಸ್ಥಿತಿಯಲ್ಲಿ ಬಿದ್ದಿದ್ದ ಬಾಲಕನನ್ನು ಪೋಷಕರು ಕಂಡು ಗಾಬರಿಯಾಗಿದ್ದಾರೆ. ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ತುಮಕೂರು ಬಿಇಓ ಹನುಮನಾಯಕ್ ಆಸ್ಪತ್ರೆಗೆ ಭೇಟಿ ನೀಡಿ ಬಾಲಕನ ಆರೋಗ್ಯ ಸ್ಥಿತಿ ವಿಚಾರಿಸಿ, ಧೈರ್ಯ ತುಂಬಿದ್ದಾರೆ.