ಹೊಸದಿಲ್ಲಿ, ಮೇ. 26: ಸಿಬಿಐಗೆ ನೂತನ ಮುಖ್ಯಸ್ಥರ ಘೋಷಣೆ ಮಾಡಲಾಗಿದ್ದು, ಐಪಿಎಸ್ ಅಧಿಕಾರಿ ಸುಬೋಧಕುಮಾರ ಜೈಸ್ವಾಲ್ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ಮಹಾರಾಷ್ಟ್ರ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಸುಬೋಧ್ ಕುಮಾರ್ ಅವರು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CSIF) ಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಇವರು 1985ನೇ ಬ್ಯಾಚ್ನ ಮಹಾರಾಷ್ಟ್ರ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಸಿಬಿಐನ ನಿರ್ದೇಶಕನ ಸ್ಥಾನಕ್ಕೆ ಸುಬೋಧ್ ಕುಮಾರ್ ಜೈಸ್ವಾಲ್ ಜತೆ ಕೆ.ಆರ್. ಚಂದ್ರ ಮತ್ತು ವಿ.ಎಸ್.ಕೌಮುದಿ ಹೆಸರು ಪಟ್ಟಿಯಲ್ಲಿತ್ತು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್. ವಿ. ರಮಣ, ಲೋಕಸಭೆ ಪ್ರತಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನೊಳಗೊಂಡ ಸಮಿತಿ ಈ ಮೂವರ ಹೆಸರನ್ನು ಆಯ್ಕೆ ಮಾಡಿತ್ತು. ಅದರಲ್ಲಿ ಸುಬೋಧ್ ಜೈಸ್ವಾಲ್ ಹೆಸರು ಮುಂಚೂಣಿಯಲ್ಲಿತ್ತು.
ಸಮಿತಿಯ ಶಿಫಾರಸಿನ ಅನ್ವಯ ಸುಬೋಧ್ ಕುಮಾರ್ ಜೈಸ್ವಾಲ್ ಅವರನ್ನು, 2 ವರ್ಷಗಳ ಅವಧಿಗೆ ಸಿಬಿಐನ ನೂತನ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ.