ಬೆಂಗಳೂರು, ಮೇ. 14: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಕೋವಿಡ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಹೈಕೋರ್ಟ್ ರಚಿಸಿರುವ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ರಾಜ್ಯ ಮೇಲ್ವಿಚಾರಣಾ ಸಮಿತಿ ತನಿಖಾ ವರದಿಯು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ.
ಗಡಿ ಜಿಲ್ಲೆಯಲ್ಲಿ ಸಂಭವಿಸಿದ್ದ ಈ ಪ್ರಕರಣ ರಾಜ್ಯದಲ್ಲಿ ದೊಡ್ಡ ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಘಟನೆ ಕುರಿತಂತೆ ತನಿಖೆ ನಡೆಸುವ ಸಲುವಾಗಿ ನ್ಯಾ.ಎ.ಎನ್. ವೇಣುಗೋಪಾಲಗೌಡ ಅವರ ನೇತೃತ್ವದಲ್ಲಿ ಸಮಿತಿಯು ರಚನೆಯಾಗಿತ್ತು.
ಹೀಗಾಗಿ ಘಟನೆಯ ಕುರಿತು ತನಿಖೆ ನಡೆಸಿದ ಸಮಿತಿಯು ಈ ಸಂಬಂಧ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ವರದಿಯಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ 24 ರೋಗಿಗಳು ಮೃತರಾಗಲು ಆಮ್ಲಜನಕದ ಕೊರತೆ ಕಾರಣ ಎಂದು ಬೆರಳು ಮಾಡಲಾಗಿದ್ದು, ಇದಕ್ಕೆ ಕೋವಿಡ್ ಅಸ್ಪತ್ರೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತವನ್ನು ಹೊಣೆ ಮಾಡಲಾಗಿದೆ.
ಚಾಮರಾಜನಗರದ ಜಿಲ್ಲಾಧಿಕಾರಿಯವರು ಜಿಲ್ಲಾ ಮುಖ್ಯಸ್ಥರಾಗಿ ಗಂಭೀರ ಸನ್ನಿವೇಶದಲ್ಲಿ ತೋರಬೇಕಾದ ಕ್ರಿಯಾಶೀಲತೆ ಮತ್ತು ನಾಯಕತ್ವವನ್ನು ತೋರುವಲ್ಲಿ ವಿಫಲರಾಗಿದ್ದಾರೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ಜಿಲ್ಲಾಧಿಕಾರಿ ಅವರು ಆಮ್ಲಜನಕ ಕೊರತೆಯ ಗಂಭೀರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ, ಮಾರ್ಗದರ್ಶನ ಮಾಡುವಲ್ಲಿ ಶೋಚನೀಯವಾಗಿ ಸೋತಿದ್ದಾರೆ. ಬದಲಿಗೆ, ಮೈಸೂರು ಜಿಲ್ಲಾಧಿಕಾರಿಯವರ ಮೇಲೆ ಆಪಾದನೆ ಮಾಡುವುದರಲ್ಲಿ ವ್ಯಸ್ತರಾದರು ಎನ್ನಲಾಗಿದೆ. ಒಟ್ಟಾಗಿ, ಜಿಲ್ಲಾಡಳಿತದ ವೈಫಲ್ಯ ಹಾಗೂ ನಿರ್ದಿಷ್ಟವಾಗಿ ಡೀನ್ ಸೇರಿದಂತೆ ಆಸ್ಪತ್ರೆ ಅಧಿಕಾರಿಗಳ ವೈಫಲ್ಯ ಇದರಲ್ಲಿ ಗೋಚರಿಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೇ ವಿಸ್ತೃತ ತನಿಖೆಯಿಂದ ಸಂಬಂಧಪಟ್ಟ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡುವುದು ಅಸಾಧ್ಯ ಎಂದು ಅಭಿಪ್ರಾಯಪಡಲಾಗಿದೆ.
ವರದಿಯ ಪ್ರಮುಖ ಶಿಪಾರಸ್ಸುಗಳು:
ಜಿಲ್ಲಾಸ್ಪತ್ರೆಗಳಿಗೆ ಆಮ್ಲಜನಕದ ಹಂಚಿಕೆ ಮತ್ತು ವಿತರಣೆ ಮಾಡುವ ಸಂಬಂಧ ಜಿಲ್ಲಾಧಿಕಾರಿಗಳಿಗಿಂತ ಮೇಲ್ದರ್ಜೆಯ ಅಧಿಕಾರಿಯೊಬ್ಬರನ್ನು ಸಮನ್ವಯಾಧಿಕಾರಿಯಾಗಿ ನೇಮಿಸಬೇಕು.
ಹೆಚ್ಚುವರಿಯಾಗಿ ಕನಿಷ್ಠ 24 ಗಂಟೆಗಳಿಗಾಗುವಷ್ಟು ಆಮ್ಲಜನಕವನ್ನು ಸಂಗ್ರಹಮಾಡಿಕೊಳ್ಳಬೇಕು. ಆಮ್ಲಜನಕ ಕೊರತೆಯಿಂದ ಉಂಟಾಗುವ ಸಾವುಗಳಲ್ಲಿ ಮರಣೋತ್ತರ ಪರೀಕ್ಷೆಯನ್ನು ಕಡ್ಡಾಯಗೊಳಿಸಬೇಕು.
ಆಮ್ಲಜನಕದ ಪ್ರಮಾಣ, ಬಳಕೆ ಮತ್ತು ಬಾಕಿ ವಿವರಗಳನ್ನು ತಿಳಿಸುವ ದಾಖಲೆಯನ್ನು ರಾಜ್ಯಾದ್ಯಂತ ಏಕರೂಪವಾಗಿ ಇರಿಸಬೇಕು. ಆಮ್ಲಜನಕದ ಸಂಗ್ರಹದ ವಿವರಗಳನ್ನು ತತ್ಕಾಲದಲ್ಲಿ (ರಿಯಲ್ಟೈಮ್) ಪ್ರದರ್ಶಿಸುವ ವ್ಯವಸ್ಥೆಯನ್ನು ರೂಪಿಸಬೇಕು. ಡಿಜಿಟಲ್ ಪರದೆಯ ಮೂಲಕ ಎಲ್ಲ ಆಸ್ಪತ್ರೆಗಳಲ್ಲಿ ಈ ವಿವರ ಪ್ರದರ್ಶಿಸಬೇಕು.