50 ವರ್ಷಗಳ ಬಳಿಕ ಮತ್ತೆ ಚಂದ್ರನ (Successful launch of Artemis 2 mission) ಸಮೀಪಕ್ಕೆ ಮಾನವಸಹಿತ ಬಾಹ್ಯಾಕಾಶ ನೌಕೆ
ಒರಾಯನ್ ನೌಕೆಯಲ್ಲಿ ನಾಲ್ವರು ಗಗನಯಾತ್ರಿಗಳು
ಚಂದ್ರನ ಸುತ್ತುಹಾಕಿ ಅಧ್ಯಯನ ನಡೆಸಿ 10 ದಿನಗಳ ಬಳಿಕ ಭೂಮಿಗೆ ಮರಳುವ ಗಗನಯಾತ್ರಿಗಳು
Florida : ಅಮೆರಿಕದ ನಾಸಾ ಸಂಸ್ಥೆಯ ಮಹತ್ವಾಕಾಂಕ್ಷಿ (Successful launch of Artemis 2 mission) ಆರ್ಟೆಮಿಸ್-II ಮಿಷನ್ (Artemis-II Mission) ಯಶಸ್ವಿಯಾಗಿ ಉಡಾವಣೆಯಾಗಿ ಚಂದ್ರನತ್ತ ತನ್ನ ಐತಿಹಾಸಿಕ ಪ್ರಯಾಣವನ್ನು ಆರಂಭಿಸಿದೆ.
ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಅತ್ಯಂತ ಶಕ್ತಿಶಾಲಿ ಸ್ಪೇಸ್ ಲಾಂಚ್ ಸಿಸ್ಟಮ್ (SLS) ರಾಕೆಟ್ ಮೂಲಕ ಒರಾಯನ್ ಬಾಹ್ಯಾಕಾಶ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು.
ಈ ನೌಕೆಯಲ್ಲಿ ನಾಲ್ವರು ಗಗನಯಾತ್ರಿಗಳು ಇದ್ದು, ಸುಮಾರು 50 ವರ್ಷಗಳ ಬಳಿಕ ಮಾನವರು ಮತ್ತೆ ಚಂದ್ರನ ಸಮೀಪಕ್ಕೆ ಪ್ರಯಾಣಿಸುತ್ತಿರುವುದು ವಿಶ್ವದ ಗಮನ ಸೆಳೆದಿದೆ.

ಭಾರತೀಯ ಕಾಲಮಾನ ಪ್ರಕಾರ ಗುರುವಾರ ಬೆಳಗ್ಗೆ ಈ ಉಡಾವಣೆ (Successful launch of Artemis 2 mission) ಯಶಸ್ವಿಯಾಗಿ ನಡೆದಿದ್ದು, ಇದು ಬಾಹ್ಯಾಕಾಶ ಅನ್ವೇಷಣೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.
ಉಡಾವಣೆಯಾದ ಕೆಲವೇ ನಿಮಿಷಗಳ ಬಳಿಕ ರಾಕೆಟ್‌ನ ಪ್ರಮುಖ ಭಾಗ ಬೇರ್ಪಟ್ಟು, ಒರಾಯನ್ ನೌಕೆ ಭೂಮಿಯ ಕೆಳ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿತು.
ನಂತರ ನೌಕೆಯ ಸೌರಫಲಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ವಿಜ್ಞಾನಿಗಳು ಮತ್ತು ಗಗನಯಾತ್ರಿಗಳು ಪರಿಶೀಲಿಸಿದರು.
ಎಲ್ಲಾ ವ್ಯವಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ನಾಸಾ ದೃಢಪಡಿಸಿದೆ. ಉಡಾವಣೆಯಾದ ಸುಮಾರು ಒಂದೂವರೆ ಗಂಟೆಯ ಬಳಿಕ ನೌಕೆ ಸುಮಾರು
74 ಸಾವಿರ ಕಿಲೋಮೀಟರ್ ಎತ್ತರದ ಕಕ್ಷೆಯನ್ನು ತಲುಪಿದ್ದು, ಅಲ್ಲಿಂದ ಮುಂದಿನ ಹಂತವಾಗಿ ಚಂದ್ರನತ್ತ ತನ್ನ ಪ್ರಯಾಣವನ್ನು ಆರಂಭಿಸಲಿದೆ.
ಈ ಮಿಷನ್ ಸುಮಾರು 10 ದಿನಗಳ ಕಾಲ ನಡೆಯಲಿದ್ದು, ಗಗನಯಾತ್ರಿಗಳು ಚಂದ್ರನನ್ನು ಸುತ್ತುವರಿದು ಅಧ್ಯಯನ ನಡೆಸಿ ನಂತರ ಭೂಮಿಗೆ ಮರಳಲಿದ್ದಾರೆ.
ಈ ಪ್ರಯಾಣದ ವೇಳೆ ನೌಕೆ ಭೂಮಿಯಿಂದ ಸುಮಾರು 4 ಲಕ್ಷ ಕಿಲೋಮೀಟರ್ ದೂರದವರೆಗೆ ಸಾಗಲಿದೆ. ಇದು 1970ರ ಅಪೊಲೊ-13 ಮಿಷನ್ ದಾಖಲೆಯನ್ನು ಮೀರಿಸುವ ಸಾಧ್ಯತೆ
ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ವಿಶೇಷವಾಗಿ, ಈ ನೌಕೆ ಚಂದ್ರನ ಹಿಂಬದಿ ಭಾಗದ ಮೂಲಕ ಹಾದು ಹೋಗಲಿದ್ದು, ಇದು ಈ ಮಿಷನ್‌ನ ಪ್ರಮುಖ ವಿಶೇಷತೆಯಾಗಿದೆ.
ಈ ಮಿಷನ್ ತಂಡದಲ್ಲಿ ನಾಲ್ವರು ಗಗನಯಾತ್ರಿಗಳು ಇದ್ದಾರೆ. ರೀಡ್ ವೈಸ್‌ಮನ್ (Reed Wiseman) ಮಿಷನ್ ಕಮಾಂಡರ್ ಆಗಿದ್ದು, ವಿಕ್ಟರ್ ಗ್ಲೋವರ್ ಪೈಲಟ್ ಆಗಿದ್ದಾರೆ.
ಕ್ರಿಸ್ಟಿನಾ ಕೋಚ್ ಮಿಷನ್ ಸ್ಪೆಷಲಿಸ್ಟ್ ಆಗಿದ್ದು, ಚಂದ್ರನತ್ತ ಪ್ರಯಾಣಿಸುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೆರೆಮಿ ಹ್ಯಾನ್ಸನ್ ಕೆನಡಾ
ಬಾಹ್ಯಾಕಾಶ ಸಂಸ್ಥೆಯನ್ನು ಪ್ರತಿನಿಧಿಸುತ್ತಿದ್ದಾರೆ. ಈ ತಂಡದ ಪ್ರಯಾಣ ಭವಿಷ್ಯದ ಬಾಹ್ಯಾಕಾಶ ಸಂಶೋಧನೆಗೆ ಮಹತ್ವದ ಮಾಹಿತಿ ಒದಗಿಸಲಿದೆ.
ಈ ಮಿಷನ್‌ನ ಮುಖ್ಯ ಉದ್ದೇಶ ಚಂದ್ರನ ಮೇಲೆ ಇಳಿಯುವುದು ಅಲ್ಲ. ಬದಲಾಗಿ, ಒರಾಯನ್ ನೌಕೆಯು ಬಾಹ್ಯಾಕಾಶದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ, ಸೂರ್ಯನ ವಿಕಿರಣಗಳನ್ನು ಹೇಗೆ ತಡೆದುಕೊಳ್ಳುತ್ತದೆ ಹಾಗೂ ಮುಂದಿನ ಮಾನವಯಾನಗಳಿಗೆ ಅಗತ್ಯವಿರುವ ತಂತ್ರಜ್ಞಾನವನ್ನು ಪರೀಕ್ಷಿಸುವುದು ಮುಖ್ಯ ಗುರಿಯಾಗಿದೆ.
ಈ ಮಿಷನ್ ಯಶಸ್ವಿಯಾದರೆ ಮುಂದಿನ ಆರ್ಟೆಮಿಸ್-III ಮಿಷನ್‌ನಲ್ಲಿ ಮಾನವರನ್ನು ಚಂದ್ರನ ಮೇಲೆ ಇಳಿಸುವ ಯೋಜನೆ ಇದೆ. ಇದರಿಂದ ಭವಿಷ್ಯದಲ್ಲಿ ಮಂಗಳ ಗ್ರಹಕ್ಕೆ
ಮಾನವರನ್ನು ಕಳುಹಿಸುವ ಯೋಜನೆಗೂ ದಾರಿಯಾಗಲಿದೆ. ಹೀಗಾಗಿ ಆರ್ಟೆಮಿಸ್-II ಮಿಷನ್ ಮಾನವ ಬಾಹ್ಯಾಕಾಶ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲಾಗಿದೆ.
ಇದನ್ನು ಓದಿ : https://vijayatimes.com/trump-blames-obama-policies/