ವಿಜಯಟೈಮ್ಸ್ ಮುಂದೆ ಬಿಚ್ಚಿಟ್ರು ಹಾಲಕ್ಕಿ ಒಕ್ಕಲಿಗೆ ಸರ್ಕಾರ ಮಾಡಿದ ಅನ್ಯಾಯದ ಕತೆ
`ಪದ್ಮಶ್ರೀ ಪ್ರಶಸ್ತಿ ವಾಪಾಸ್ ಕೊಡ್ತೀನಿ’ ಇದು “ಪದ್ಮಶ್ರೀ” ಪುರಸ್ಕೃತೆ, ಕರುನಾಡಿನ ಹೆಮ್ಮೆ, ಹಿರಿಯ ಜನಪದ ಕಲಾವಿದೆ ಸುಕ್ರಜ್ಜಿ ನೋವಿನ ನುಡಿ. ಪದ್ಮಶ್ರೀ ಸುಕ್ರಿ ಬೊಮ್ಮೆಗೌಡ ಈ ಹೇಳಿಕೆ ನೀಡಲು ಮುಖ್ಯ ಕಾರಣ ಏನು ಗೊತ್ತಾ? ಹಾಲಕ್ಕಿ ಒಕ್ಕಲು ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ ತೋರಿಸುತ್ತಿದೆ. ಪದೇ ಪದೇ ಬೇಡಿದ್ರೂ ಎಸ್‌ಟಿ ಸ್ಥಾನಮಾನ ನೀಡದ ಸರ್ಕಾರದ ಧೋರಣೆಯಿಂದ ನೊಂದಿರುವ “ಪದ್ಮಶ್ರೀ” ಪುರಸ್ಕೃತೆ, ಕರುನಾಡಿನ ಹೆಮ್ಮೆ, ಜನಪದ ಕಲಾವಿದೆ ಪುರಸ್ಕೃತ ಮಹಿಳೆ ಸುಕ್ರಜ್ಜಿ ತಮ್ಮ ಪ್ರಶಸ್ತಿಯನ್ನು ವಾಪಸ್ಸು ನೀಡುತ್ತೇನೆ ಎಂದು ವಿಜಯ ಟೈಮ್ಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಹಿಂತಿರುಗಿಸುವ ನಿರ್ಧಾರ ಯಾಕೆ ?
ಸುಕ್ರಜ್ಜಿ ಈ ನಿರ್ಧಾರದ ಹಿಂದೆ ಬಲವಾದ ಕಾರಣಗಳಿವೆ. ಉತ್ತರ ಕನ್ನಡ ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಗೆ ಮಾತ್ರ ಸೀಮಿತವಾಗಿರುವ, ಕಾಡನ್ನು ನಂಬಿ ಬದುಕು ಕಟ್ಟಿಕೊಂಡ ಹಾಲಕ್ಕಿ ಜನಾಂಗ ಈ ನೆಲದ ಮೂಲನಿವಾಸಿಗಳು. ಬುಡಕಟ್ಟು ಜನಾಂಗಕ್ಕೆ ಸೇರಿದವರು. ಈಗಲೂ ತಮ್ಮ ಬುಡಕಟ್ಟು ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವುದರಿಂದ ಇಡೀ ಜನಾಂಗ ಶಿಕ್ಷಣದಿಂದ ವಂಚಿತವಾಗಿದೆ. ಒಂದೂವರೆ ಲಕ್ಷ ಜನಸಂಖ್ಯೆ ಇದ್ರೂ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ದುರಂತ ಅಂದ್ರೆ ಇವರನ್ನು ಇನ್ನೂ ಎಸ್‌ಟಿ ಅಂತ ಪರಿಗಣಿಸಲೇ ಇಲ್ಲ. ದಶಕಗಳಿಂದ ಇವರು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಅಂತ ಬೇಡಿಕೆ ಇಡುತ್ತಲೇ ಇದ್ದಾರೆ. ಅದ್ರಲ್ಲೂ ಕಳೆದ ಕಳೆದ 20 ವರ್ಷದಿಂದ ಹಾಲಕ್ಕಿ ಜನಾಂಗಕ್ಕೆ ನ್ಯಾಯ ಕೊಡಿ ಅಂತ ಬಲವಾದ ಹೋರಾಟ ಮಾಡುತ್ತಲೇ ಇದ್ದಾರೆ. ಆದ್ರೆ ಯಾವ ಸರ್ಕಾರವೂ ಇವರಿಗೆ ನ್ಯಾಯ ಕೊಡುತ್ತಿಲ್ಲ. ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ ಇವರು ಮತ ಹಾಕೋ ಯಂತ್ರಗಳಷ್ಟೇ. ಇವರ ಬೇಡಿಕೆಯನ್ನು ಆಳುವ ಸರ್ಕಾರಗಳು ನಿರ್ಲಕ್ಷಿಸುತ್ತ ಬಂದಿರುವುದರಿಂದ ಹಾಲಕ್ಕಿ ಮಕ್ಕಳ ಬದುಕು ಬಹಳ ಹೀನಾಯ ಸ್ಥಿತಿ ತಲುಪಿದೆ. ಇದರಿಂದ ನೊಂದಿರುವ ‘ಪದ್ಮಶ್ರೀ’ ಸುಕ್ರಜ್ಜಿ, ಹಾಲಕ್ಕಿ ಜನಾಂಗವನ್ನು ಎಸ್‌ಟಿಗೆ ಸೇರಿಸದಿದ್ದರೆ ಪ್ರಶಸ್ತಿಯನ್ನು ಹಿಂದಕ್ಕೆ ನೀಡುವುದಾಗಿ ವಿಜಯಟೈಮ್ಸ್ ತಿಳಿಸಿದ್ದಾರೆ.

ಹೋರಾಟದ ಹಾದಿ ಹಿಡಿದ ಹಾಲಕ್ಕಿ ಮಕ್ಕಳು
ಸರ್ಕಾರಕ್ಕೆ ಹಾಲಕ್ಕಿ ಮಕ್ಕಳ ಕೂಗು ಕೇಳುತ್ತಿಲ್ಲ. ಇವರ ಕೂಗು ಸರ್ಕಾರದ ಮಟ್ಟಕ್ಕೆ ತಲುಪಿಸಲು, ದನಿ ಇಲ್ಲದ ಹಾಲಕ್ಕಿ ಮಕ್ಕಳಿಗೆ ದನಿಯಾಗಲು ವಿಜಯಟೈಮ್ಸ್‌ನ ಕವರ್‌ಸ್ಟೋರಿ ತಂಡ ಹಾಲಕ್ಕಿ ಒಕ್ಕಲು ಜನಾಂಗ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯ ಅಧ್ಯಯನ ಮಾಡಲು ಪ್ರಾರಂಭ ಮಾಡಿದಾಗ ಕೆಲ ಅಚ್ಚರಿಯ, ನೋವಿನ ಸಂಗತಿಗಳು ಬಯಲಾದವು. ಇದೇ ಸಂದರ್ಭದಲ್ಲಿ ಸುಕ್ರಜ್ಜಿ ತಮ್ಮ ಮನದಾಳದ ನೋವನ್ನು ಬಿಚ್ಚಿಟ್ಟು, ಪದ್ಮಶ್ರೀ ಪ್ರಶಸ್ತಿ ಹಿಂದಕ್ಕೆ ಕೊಡುವ ಮಾತನ್ನು ಹೇಳಿದ್ರು.

ಹಾಲಕ್ಕಿ ಒಕ್ಕಲು ಜನಾಂಗದವರಿಗೆ ಎಸ್‌ಟಿ ಸ್ಥಾನಮಾನ ನೀಡಬಹುದು ಅಂತ ಕುಲಶಾಸ್ತ್ರ ಅಧ್ಯಯನದಲ್ಲಿ ಸ್ಪಷ್ಟವಾಗಿ ಹೇಳಿದೆ. ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಆದ್ರೆ ಈಗ ಕೇಂದ್ರ ಸರ್ಕಾರ ಇದಕ್ಕೆ ಅನುಮೋದನೆ ನೀಡಬೇಕು. ಈ ನಿಟ್ಟಿನಲ್ಲಿ ಉತ್ತರ ಕನ್ನಡ ಭಾಗದ ಜನಪ್ರತಿನಿಧಿಗಳು ಆಸಕ್ತಿ ತೋರಿಸಿ ಕಡತಗಳ ಮಧ್ಯೆ ಸಿಲುಕಿರುವ ಹಾಲಕ್ಕಿ ಮಂದಿಯ ಹಕ್ಕನ್ನು ಕೊಡಿಸಬೇಕು. ಆದ್ರೆ ಆ ಪ್ರಯತ್ನವನ್ನು ರಾಜಕಾರಣಿಗಳು ಮಾಡುತ್ತಿಲ್ಲ. ಅವರು ಬರೀ ಭರವಸೆಯನ್ನಷ್ಟೇ ನೀಡುತ್ತಿದ್ದಾರೆ. ಹಾಗಾಗಿ ಈಗ ಇವರನ್ನು ನಂಬಿದ್ರೆ ಹಾಲಕ್ಕಿಗಳಿಗೆ ನ್ಯಾಯ ಕನಸಾಗಿಯೇ ಉಳಿಯುತ್ತೆ ಅಂತ ಭಾವಿಸಿ ಈಗ ಹಾಲಕ್ಕಿ ಒಕ್ಕಲು ಜನಾಂಗದ ಮುಖಂಡರು, ಯುವಕರು, ವಿದ್ಯಾರ್ಥಿಗಳು ಹೋರಾಟದ ಹಾದಿ ಹಿಡಿದಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ ಪದ್ಮಶ್ರೀ ಸುಕ್ರಜ್ಜಿ, ವೃಕ್ಷಮಾತೆ ಪ್ರದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ತುಳಸಿ ಗೌಡ ಅವರ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳು ಇವರ ಮನವಿಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ರು. ಜಿಲ್ಲಾಧಿಕಾರಿಗಳು ಭರವಸೆ ಎಷ್ಟರ ಮಟ್ಟಿಗೆ ನಿಜವಾಗುತ್ತೆ ಅನ್ನೋದನ್ನ ಕಾದುನೋಡೋಣ. ಒಂದು ವೇಳೆ ತಮ್ಮ ಭರವಸೆ ಈಡೇರದಿದ್ರೆ ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಬೆಂಗಳೂರು, ದೆಹಲಿ ಚಲೋ ಮಾಡಲು ಸಿದ್ಧರಿದ್ದೇವೆ ಅನ್ನೋ ಎಚ್ಚರಿಕೆಯನ್ನು ಹಾಲಕ್ಕಿ ಮಕ್ಕಳು ಈ ಸಂದರ್ಭದಲ್ಲಿ ನೀಡಿದ್ದಾರೆ.