ಜಂಬೂ ಹಣ್ಣಿನ(Rose Apple) ಬಗ್ಗೆ ಕೆಲವರಲ್ಲ, ಹಲವರಿಗೆ ತಿಳಿದಿಲ್ಲ! ಕರಾವಳಿ(Coastal) ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ಹಣ್ಣನ್ನು ಸಾಮಾನ್ಯವಾಗಿ ಪನ್ನೇರಳೆ ಎಂದು ಕರೆಯುತ್ತಾರೆ. ಈ ಹಣ್ಣಿನ ಹೆಸರು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಕರೆಯಲಾಗುತ್ತದೆ. ಜಂಬೂ ಹಣ್ಣು ಕೆಂಪು, ಬಿಳಿ, ಗುಲಾಬಿ ಮತ್ತು ಹಸಿರು ಬಣ್ಣದಲ್ಲಿ ಲಭ್ಯವಿದೆ.

ಅದರಲ್ಲೂ ಬಿಳಿ ಬಣ್ಣದ ಜಂಬೂ ಹಣ್ಣು ವಿಶೇಷವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಪನ್ನೇರಳೆ /ಜಂಬೂ ಹಣ್ಣಿನ ಮೂಲ ಇಂಡೋನೇಶಿಯಾ ಮತ್ತು ಮಲೇಷಿಯಾ, ಈ ಹಣ್ಣನ್ನು ಹೆಚ್ಚಾಗಿ ದಕ್ಷಿಣ ಏಷ್ಯಾ ,ವೆಸ್ಟಿಂಡೀಸ್ ,ಜಮೈಕಾ ,ಅಮೇರಿಕಾ ,ಮೆಕ್ಸಿಕೋ ಮತ್ತು ಪೆಸಿಫಿಕ್ ದ್ವೀಪಗಳಲ್ಲಿ ಬೆಳೆಯುತ್ತಾರೆ.
ಹೊಳೆಯುವ ಗಾಢ ಕೆಂಪು ಮಿಶ್ರಿತ ಗುಲಾಬಿ ಬಣ್ಣದ ಜಂಬು ಹಣ್ಣುಗಳು ತಿನ್ನಲು ಎಲ್ಲರಿಗೂ ಇಷ್ಟವೇ. ನುಣುಪು ಮೈ, ರಸಭರಿತ, ಸಿಹಿ-ಹುಳಿ, ಒಗರು ಸೇರಿದ ರುಚಿ.
ಜಂಬು ಹಣ್ಣು, ಪನ್ನೇರಳೆ ಹಣ್ಣು, ಇಂಗ್ಲಿಷ್ನಲ್ಲಿ, JavaApple, RoseApple ಎಂದು ಕರೆಯಲ್ಪಡುವ ಈ ಹಣ್ಣಿನ ಗಿಡದ ವೈಜ್ಞಾನಿಕ ಹೆಸರು Syzygium samarangense. Myrtacea ಕುಟುಂಬಕ್ಕೆ ಸೇರಿದೆ. ಬಣ್ಣ, ಆಕಾರ, ರುಚಿಯಲ್ಲಿ ವ್ಯತ್ಯಾಸವಿರುವ ಇದೇ ಹಣ್ಣಿನ ಹಲವು ಪ್ರಭೇದಗಳು ಕಾಣಸಿಗುತ್ತವೆ. ಗಾಢ ಗುಲಾಬಿ, ಹಸಿರು, ಬಿಳಿ ಬಣ್ಣದ ಹಣ್ಣುಗಳು ಹೆಚ್ಚಾಗಿ ಸಿಹಿಯಾಗಿರುತ್ತವೆ. ಅಲ್ಲದೆ ಸುವಾಸನಾಯುಕ್ತ ರಸವನ್ನು ಕೂಡಾ ಹೊಂದಿರುತ್ತವೆ. ಕೆಲವರಿಗೆ ಸಿಹಿ ಇರುವ ಹಣ್ಣು ಇಷ್ಟವಾದರೆ ಹೆಚ್ಚಿನವರಿಗೆ ಹುಳಿಮಿಶ್ರಿತವಾದ ಈ ಹಣ್ಣು ಬಲು ಪ್ರಿಯ.
ಬಹೂಪಯೋಗಿಯಾದ ಈ ಹಣ್ಣುಗಳಲ್ಲಿ ಔಷಧೀಯ ಗುಣಗಳ ಭಂಡಾರವೇ ಅಡಗಿದೆ. ಪ್ರೋಟೀನ್, ವಿಟಮಿನ್ ‘ಎ’, ವಿಟಮಿನ್ ‘ಸಿ’, ಕಬ್ಬಿಣ ಸತ್ವ, ಕ್ಯಾಲ್ಸಿಯಂ, ನಾರಿನಂಶ ಹೇರಳವಾಗಿದೆ. ನಾರಿನಂಶದಿಂದಾಗಿ ಮಲಬದ್ಡತೆಯನ್ನು ತಡೆಯುತ್ತದೆ, ಹಾಗೆಯೇ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ವಿಟಮಿನ್ ‘ಸಿ’ ಅಂಶ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಹಣ್ಣಿನಲ್ಲಿ ನೀರಿನ ಅಂಶ ಹೇರಳವಾಗಿರುವುದರಿಂದ ಬೇಸಿಗೆ ಕಾಲದಲ್ಲಿ ಈ ಹಣ್ಣುಗಳ ಸೇವನೆಯು ದೇಹದ ಉಷ್ಣಾಂಶವನ್ನು ತಗ್ಗಿಸಲು ಸಹಕಾರಿಯಾಗಿದೆ. ಮಾರಕ ರೋಗ ಕ್ಯಾನ್ಸರ್ ಕಡಿಮೆ ಮಾಡುವ ಅಂಶಗಳು ಕೂಡಾ ಈ ಹಣ್ಣಿನಲ್ಲಿವೆ ಎಂದು ಹೇಳಲಾಗಿದೆ.

ಶೇಕಡಾ 93 ರಷ್ಟು ನೀರಿನ ಅಂಶವನ್ನು ಹೊಂದಿರುವ ಬಿಳಿ ಜಂಬೂ ಹಣ್ಣು ಬೇಸಿಗೆಯಲ್ಲಿ ದೇಹವನ್ನು ದೂರವಿರಿಸುತ್ತದೆ ಮತ್ತು ದೇಹವನ್ನು ತಂಪಾಗಿಡುತ್ತದೆ. ಹೀಗಾಗಿ ಇದು ದೇಹದಲ್ಲಿ ನೀರಿನಾಂಶವನ್ನು ಹೆಚ್ಚಿಸುತ್ತದೆ ಮತ್ತು ಡಿಹೈಡ್ರೇಷನ್ ಸಮಸ್ಯೆಯನ್ನು ದೂರ ಮಾಡುತ್ತದೆ.ಈ ಹಣ್ಣಿನಲ್ಲಿ ಆ್ಯಂಟಿಮೈಕ್ರೊಬಿಯಲ್ ಗುಣಗಳಿವೆ. ಇದು ಸೋಂಕು ನಿಯಂತ್ರಣ ಶಕ್ತಿ ಹೊಂದಿದ್ದು, ಕೋವಿಡ್ನಂತಹ ಈ ಸಮಯದಲ್ಲಿ ಹೆಚ್ಚು ಉಪಯುಕ್ತಕಾರಿಯಾಗಿದೆ.
- ಪವಿತ್ರ ಸಚಿನ್