ಗ್ಯಾನವಾಪಿ ಮಸೀದಿಯ(Gyanvapi Mosque) ಸಮೀಕ್ಷೆ(Survey) ನಡೆಸುತ್ತಿರುವ ವಕೀಲರೊಬ್ಬರು ಆವರಣದೊಳಗಿನ ಬಾವಿಯಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಪ್ರತಿಪಾದಿಸಿದ ಕೆಲವೇ ಗಂಟೆಗಳ ನಂತರ, ಸಿವಿಲ್ ನ್ಯಾಯಾಲಯವು ಪ್ರದೇಶವನ್ನು ಸೀಲ್ ಮಾಡಲು ಮತ್ತು ಪ್ರದೇಶಕ್ಕೆ ಜನರ ಪ್ರವೇಶವನ್ನು ನಿಷೇಧಿಸಲು ಆದೇಶವನ್ನು ನೀಡಿದೆ.

ಇದಕ್ಕೂ ಮುನ್ನ ವಕೀಲ ವಿಷ್ಣು ಜೈನ್ ಅವರು ಸ್ಥಳೀಯ ಮಾಧ್ಯಮಕ್ಕೆ ದೂರವಾಣಿ ಕರೆ ಮೂಲಕ ಮಾತನಾಡಿ, ಬಾವಿಯೊಳಗೆ ಶಿವಲಿಂಗವೊಂದು ಪತ್ತೆಯಾಗಿದೆ. ಅದರ ರಕ್ಷಣೆಗಾಗಿ ಸಿವಿಲ್ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದರು. ಶಿವಲಿಂಗವು 12 ಅಡಿ 8 ಇಂಚು ವ್ಯಾಸವನ್ನು ಹೊಂದಿದೆ. ಹಿಂದೂ ಪರ ವಕೀಲರಾದ ಮದನ್ ಮೋಹನ್ ಯಾದವ್, ಶಿವಲಿಂಗವು ನಂದಿಯನ್ನು ಎದುರಿಸುತ್ತಿದೆ ಎಂದು ಪ್ರತಿಪಾದಿಸಿದರು.
ಈ ಮಧ್ಯೆ ಗ್ಯಾನವಾಪಿ ಮಸೀದಿಯ ಸಮೀಕ್ಷೆಗೆ ನಿರ್ದೇಶಿಸುವ ವಾರಣಾಸಿ(Varanasi) ನ್ಯಾಯಾಲಯದ ಆದೇಶದ ವಿರುದ್ಧ ಅಂಜುಮನ್ ಇಂತಾಝಾಮಿಯಾ ಮಸೀದಿ ಸಮಿತಿಯ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ಮಾಡುವ ಸಾಧ್ಯತೆಯಿದೆ. ವಾರಣಾಸಿಯ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಗ್ಯಾನವಾಪಿ ಮಸೀದಿ ಸದ್ಯ ಕಾನೂನು ಹೋರಾಟ ಎದುರಿಸುತ್ತಿದೆ. ವಾರಣಾಸಿಯ ನ್ಯಾಯಾಲಯವು ಗ್ಯಾನವಾಪಿ ಮಸೀದಿಯ ರಚನೆಯ ಬಗ್ಗೆ ತನಿಖೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶಿಸಿದೆ.

ದೆಹಲಿ ಮೂಲದ ಐವರು ಮಹಿಳೆಯರು — ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು ಮತ್ತು ಇತರರು ತಮ್ಮ ಮನವಿಯೊಂದಿಗೆ ಏಪ್ರಿಲ್ 18, 2021 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು, ಅದರ ಹೊರ ಗೋಡೆಗಳ ಮೇಲಿನ ಹಿಂದೂ ದೇವತೆಗಳ ವಿಗ್ರಹಗಳ ಮುಂದೆ ದೈನಂದಿನ ಪ್ರಾರ್ಥನೆಗೆ ಅನುಮತಿ ಕೋರಿರುವುದಾಗಿ ತಿಳಿದುಬಂದಿದೆ ಎನ್ನಲಾಗಿದೆ.