ಬೆಳಗಾವಿ, ಡಿ. 26: ಸುರೇಶ ಅಂಗಡಿ ಅಕಾಲಿಕ ನಿಧನದ ನಂತರ ಮೊದಲ ಬಾರಿಗೆ ಪುತ್ರಿ ಶ್ರದ್ಧಾ ಶೆಟ್ಟರ್ ಬಹಿರಂಗ ಸಮಾರಂಭದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸುರೇಶ ಅಂಗಡಿ ಅವರ ಕಿರಿಯ ಪುತ್ರಿ ಹಾಗೂ ಜಗದೀಶ ಶೆಟ್ಟರ್ ಅವರ ಸೊಸೆಯಾಗಿರುವ ಶ್ರದ್ಧಾ ಶೆಟ್ಟರ್ ಬೆಳಗಾವಿ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಬಿಜೆಪಿ ಆಯೋಜಿಸಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಮುಗಿದ ನಂತರ ಲವಲವಿಕೆಯಿಂದ ಎಲ್ಲ ಕಡೆಗೂ ಓಡಾಡಿದ ಶ್ರದ್ಧಾ ಶೆಟ್ಟರ್ ರೈತರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಮಹಿಳಾ ರೈತರನ್ನು ಅಪ್ಪಿಕೊಂಡು ಯೋಗಕ್ಷೇಮ ವಿಚಾರಿಸುತ್ತಿರುವುದು ಎಲ್ಲರ ಗಮನ ಸೆಳೆಯಿತು.
ತಂದೆ ಸುರೇಶ ಅಂಗಡಿ ನಿಧನದ ಬಳಿಕ ಯಾವ ಕಾರ್ಯಕ್ರಮದಲ್ಲಿಯೂ ಬಹಿರಂಗವಾಗಿ ಶ್ರದ್ಧಾ ಕಾಣಿಸಿಕೊಂಡಿರಲಿಲ್ಲ. ಬೆಳಗಾವಿ ಲೋಕಸಭಾ ಉಪ-ಚುನಾವಣಾ ಟಿಕೆಟ್ ಆಕಾಂಕ್ಷಿಯಾಗಿರುವ ಸೊಸೆ ಶ್ರದ್ಧಾಗೆ ಟಿಕೆಟ್ ಕೊಡಿಸಲು ಸಚಿವ ಜಗದೀಶ ಶೆಟ್ಟರ್ ದೆಹಲಿ ಸೇರಿದಂತೆ ರಾಜ್ಯಮಟ್ಟದಲ್ಲಿ ತೀವ್ರ ಲಾಬಿ ನಡೆಸಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಸಕ್ರಿಯ ರಾಜಕಾರಣದಲ್ಲಿ ಭಾಗವಹಿಸಿರುವ ಶ್ರದ್ಧಾ ಕೆಲವು ದಿನಗಳಿಂದ ಸದ್ದಿಲ್ಲದೇ ಬಿಜೆಪಿ ಶಾಸಕರು, ಮುಖಂಡರನ್ನು ಭೇಟಿ ಮಾಡುತ್ತಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಯ ಕುರಿತು ಪ್ರತಿಕ್ರಿಯಿಸಿದ ಶ್ರದ್ಧಾ ಶೆಟ್ಟರ್, ಸ್ಪರ್ಧೆಯ ಬಗ್ಗೆ ಈಗಲೇ ಏನೂ ಹೇಳುವುದಿಲ್ಲ. ಅಭಿಮಾನಿಗಳು ತಂದೆ ನಿಧನದ ನಂತರ ನಮ್ಮನ್ನು ಭೇಟಿ ಮಾಡುತ್ತಿದ್ದಾರೆ. ಅಭಿಮಾನಿಗಳು ನಮ್ಮ ಕುಟುಂಬದ ಮೇಲೆ ತೋರುತ್ತಿರುವ ಪ್ರೀತಿ ಕಂಡು ಖುಷಿಯಾಗುತ್ತಿದೆ. ಅಭಿಮಾನಿಗಳ ಜತೆ ಸಂಪರ್ಕ ಬೆಳೆಸಿಕೊಂಡು ಹೋಗುತ್ತೇನೆ ಎಂದಷ್ಟೇ ತಿಳಿಸಿದ್ದಾರೆ.